LATEST NEWS
ಚುನಾವಣೆ ಇದ್ದರೂ ಯಾವುದೇ ಓಲೈಕೆಯ ಘೋಷಣೆ ಇಲ್ಲದ ಮಧ್ಯಂತರ ಬಜೆಟ್ – ಶಾಸಕ ವೇದವ್ಯಾಸ್ ಕಾಮತ್
ಮಂಗಳೂರು ಫೆಬ್ರವರಿ 01: ದೇಶ ಚುನಾವಣೆಯ ಹೊಸ್ತಿಲಲ್ಲಿದ್ದರೂ ಯಾವುದೇ ಓಲೈಕೆಯ ಘೋಷಣೆಗಳಿಲ್ಲದ ಭವ್ಯ ಭಾರತದ ಭವಿಷ್ಯದ ದೃಷ್ಟಿಯಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರದ ಮಧ್ಯಂತರ ಬಜೆಟ್ ಭಾರತವೀಗ ಸ್ವಾವಲಂಬಿ ಹಾಗೂ ಹೊಸ ದಿಕ್ಕಿನತ್ತ ಸಾಗುತ್ತಿರುವುದರ ಸಂಕೇತ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು.
ಇದು ದೇಶದ ಭರವಸೆಯ ಬಜೆಟ್ ಆಗಿದ್ದು ಬಿಜೆಪಿ ಸರ್ಕಾರದ ಮುಖ್ಯ ಗುರಿಯೇ ದೇಶದ ಮೂಲಭೂತ ಸೌಕರ್ಯದ ಅಭಿವೃದ್ಧಿ. ಆ ನಿಟ್ಟಿನಲ್ಲಿ ಕೇಂದ್ರದ ಮೋದಿ ಸರ್ಕಾರವು ದೇಶವನ್ನು ಕೊಂಡೊಯ್ಯುತ್ತಿದೆ. ಪಿಎಂ ಆವಾಸ್ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ 3 ಕೋಟಿ ಮನೆ ನಿರ್ಮಾಣದ ಗುರಿಯನ್ನು ಹಾಕಿಕೊಂಡಿದ್ದು ಬಡವರ ಸ್ವಂತ ಸೂರಿನ ಕನಸು ನನಸಾಗಲಿದೆ. ಆಶಾ-ಅಂಗನವಾಡಿ, ಕಾರ್ಯಕರ್ತೆಯರಿಗೆ, ಸಹಾಯಕರಿಗೂ ಆಯುಷ್ಮಾನ್ ಯೋಜನೆ ವಿಸ್ತರಣೆ ಮಾಡಲಾಗಿದೆ. ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡದೆ ಈ ಹಿಂದಿನ ಸ್ಥಿತಿಯನ್ನೇ ಅನುಸರಿಸಿದ್ದು ಮಧ್ಯಮ ವರ್ಗಕ್ಕೆ ಅನುಕೂಲಕರವಾಗಲಿದೆ ಎಂದರು.
ಪಿಎಂ ಗತಿಶಕ್ತಿ ಮೂಲಕ ಮೂರು ಪ್ರಮುಖ ರೈಲ್ವೆ ಕಾರಿಡಾರ್ ಗಳ ನಿರ್ಮಾಣದ ಗುರಿ, ದೇಶದ ಎಲ್ಲಾ ನಗರಗಳಿಗೂ ಮೆಟ್ರೋ ಯೋಜನೆಗಳನ್ನು ವಿಸ್ತರಿಸುವ ಯೋಜನೆ, ಪ್ರವಾಸೋದ್ಯಮ ವಲಯಕ್ಕೆ ಹೆಚ್ಚಿನ ಉತ್ತೇಜನ, ಒಂದು ಕೋಟಿ ಮನೆಗಳ ಮೇಲೆ ಸೋಲಾರ್ ಅಳವಡಿಕೆ, ರಸ್ತೆ-ರೈಲು-ಬಂದರುಗಳ ಕಾರಿಡಾರ್ ನಿರ್ಮಾಣ, ಡೈರಿಗಳಿಗೆ ರಾಷ್ಟ್ರೀಯ ಗೋಕುಲ್ ಮಿಷನ್ ನಡಿ ಪ್ರೋತ್ಸಾಹ ಹೀಗೆ, ಮಹಿಳೆಯರು, ರೈತರು, ಯುವ ಜನಾಂಗ ಸೇರಿದಂತೆ ಎಲ್ಲಾ ವರ್ಗದ ಜನರನ್ನೂ ಈ ಮಧ್ಯಂತರ ಬಜೆಟ್ ನಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಭಾರತವು ವಿಶ್ವದ ಆರ್ಥಿಕತೆಗೆ ಸವಾಲೊಡ್ದುವತ್ತ ದಾಪುಗಾಲಿಟ್ಟಿದೆ. ನನ್ನ ಮೂರನೇ ಅವಧಿಯಲ್ಲಿ ಜಗತ್ತಿನ ಮೂರು ಅತಿದೊಡ್ಡ ಆರ್ಥಿಕತೆಯಲ್ಲಿ ಭಾರತವೂ ಒಂದಾಗಲಿದೆ ಎಂದು ಸ್ವತಃ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದು ಆ ದಿನಗಳೂ ಸಹ ದೂರವಿಲ್ಲ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.