Connect with us

    DAKSHINA KANNADA

    ಭ್ರಷ್ಟಾಚಾರಕ್ಕೆಎಡೆಮಾಡಿಕೊಡುವ ಮಂಗಳೂರು ವಿವಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸಮಗ್ರ ತನಿಖೆಯಾಗಲಿ : Dr. S R ಹರೀಶ್ ಆಚಾರ್ಯ ಆಗ್ರಹ..!

    ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಮಾಜಿ ಸಿಂಡಿಕೇಟ್ ಸದಸ್ಯ ಡಾ. ಎಸ್ ಆರ್ ಆಚಾರ್ಯ ಆಗ್ರಹಸಿದ್ದಾರೆ.

    ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆಚಾರ್ಯ  ಕೋಲಾರ – ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಒಕ್ಕೂಟ (ಕೊಚಿಮಲ್) ಇದರ ಉದ್ಯೋಗಿಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಅರ್ಹತಾ ಲಿಖಿತ ಪರೀಕ್ಷೆಯನ್ನು ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದೆ.

    ಈ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಕೋಟಿ ರೂಪಾಯಿಗಳ ಹಗರಣ ನಡೆದಿರುವ ಹಿನ್ನಲೆಯಲ್ಲಿ ಪರೀಕ್ಷಾ ಕಾರ್ಯವನ್ನು ನಿರ್ವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕಚೇರಿಗೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ವಿಚಾರಣೆಗೆ ಒಳಪಡಿಸಿದೆ. ಇದು ಈಗಾಗಲೇ ಹಲವಾರು ಗೊಂದಲಗಳಿಂದ ಸುದ್ದಿಯಲ್ಲಿರುವ ವಿವಿಯ ಘನತೆಗೆ ಮತ್ತಷ್ಟು ಕುಂದುಂಟಾಗಿರುವ ಸಂಗತಿಯಾಗಿದೆ. ಸಹಕಾರಿ ಕಾಯ್ದೆಯ ಆವಕಾಶದಂತೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿರ್ವಹಿಸಲು ನೇಮಕಾತಿ ನಡೆಸುವ ಸಂಸ್ಥೆಗಳು ವಿಶ್ವವಿದ್ಯಾನಿಲಯದಂತಹ ಸಂಸ್ಥೆಗಳಿಗೆ ನೀಡಬಹುದಾಗಿದೆ. ಆದರೆ ಯಾವುದೇ ವಿಶ್ವವಿದ್ಯಾನಿಲಯಗಳು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ತನ್ನಲ್ಲಿ ಅದಕ್ಕೆ ಬೇಕಾದ ಒಳನಿಯಮಗಳನ್ನು ರಚಿಸಿಕೊಂಡು ಅದನ್ನು ಅದಕ್ಕೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರ ಯಾ ಸಿಂಡಿಕೇಟ್ ಅನುಮತಿಯನ್ನು ಪಡೆದು ನಡೆಸಬೇಕಾಗುತ್ತದೆ. ಅದರೆ ಮಂಗಳೂರು ವಿವಿಯು ತನ್ನ ಹೊರಗಿನ ಸಂಸ್ಥೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಸೂಕ್ತ ನಿಯಮಾವಳಿಗಳನ್ನು ರಚಿಸಿಕೊಂಡಿದೆಯೇ? ಇಲ್ಲವೆಂದಾದಲ್ಲಿ ಯಾವ ಅಧಿಕಾರವನ್ನು ಬಳಸಿಕೊಂಡು ಖಾಸಗಿಯಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಯುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಎಸ್‌ ಆರ್ ಹರೀಶ್ ಆಚಾರ್ಯ ಪ್ರಶ್ನಿಸಿದ್ದಾರೆ.
    ವಿಶ್ವವಿದ್ಯಾನಿಲಯಗಳು ಯಾವುದೇ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ತನ್ನಲ್ಲಿ ಒಳನಿಯಮಗಳನ್ನು ರಚಿಸಿಕೊಂಡು ಸಕ್ಷಮ ವಿಭಾಗಗಳಿಂದ ಅಂಗೀಕಾರ ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಭಂದಿಸಿದಂತೆ ಪರೀಕ್ಷಾ ಶುಲ್ಕವನ್ನು ನಿರ್ಧರಿಸಬೇಕಾಗುತ್ತದೆ. ಪರೀಕ್ಷಾ ಮಂಡಳಿಗಳನ್ನು ರಚಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಆದರೆ ಇದು ಯಾವುದನ್ನು ಮಾಡದೆ ಕಳೆದ ಮೂರು – ನಾಲ್ಕು ವರ್ಷಗಳಲ್ಲಿ ಸುಮಾರು ಇಪ್ಪತ್ತೈದಕ್ಕಿಂತ ಹೆಚ್ಚು ಸಹಕಾರ ಸಂಘಗಳಿಗೆ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿರುವುದು ಕಂಡುಬರುತ್ತದೆ. ಇದರಲ್ಲಿ ಹೆಚ್ಚಿನ ಸಂಸ್ಥೆಗಳು ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಹೊರಗಿನ ಜಿಲ್ಲೆಗಳ ಸಂಸ್ಥೆಗಳಾಗಿದ್ದು ಈ ಲಿಖಿತ ಪರೀಕ್ಷೆಗಳನ್ನು ಕೂಡ ಜಿಲ್ಲೆಯ ಹೊರಗಿನ ಖಾಸಗಿ ಪದವಿ ಪೂರ್ವ ಕಾಲೇಜು ಒಂದರಲ್ಲಿ ಹೆಚ್ಚಾಗಿ ನಡೆಸಿರುವುದು ಕಂಡುಬಂದಿರುತ್ತದೆ. ಈಗಾಗಿ ವಿಶ್ವವಿದ್ಯಾನಿಲಯವು ತಾವು ತಾವಾಗಿಯೇ ನಡೆಸಿರುವ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಅನಧಿಕೃತವೇ ಆಗಿದೆ. ಆದುದರಿಂದ ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
    ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗವು ಕಳೆದ ಕೆಲವು ವರ್ಷಗಳಿಂದ ಪದವಿ ಕಾಲೇಜುಗಳ ಪರೀಕ್ಷೆಗಳನ್ನು ಸರಿಯಾಗಿ ನಡೆಸದೆ, ಅದರ ಫಲಿತಾಂಶವನ್ನು ಸರಿಯಾಗಿ ನೀಡದೆ, ಫಲಿತಾಂಶ ಬಂದರೂ ಅಂಕಪಟ್ಟಿಯನ್ನು ಸಕಾಲದಲ್ಲಿ ವಿತರಿಸಲು ಸರಿಯಾದ ಕ್ರಮ ಇಡದೇ, ಪರೀಕ್ಷಾ ವ್ಯವಸ್ಥೆಯ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯದೋರಣೆಯನ್ನು ತಾಳಿದೆ. ಇದರಿಂದ ಫಲಿತಾಂಶ ಬಂದರೂ ಸರಿಯಾದ ಸಮಯಕ್ಕೆ ಅಂಕಪಟ್ಟಿ ದೊರೆಯದೆ ಉನ್ನತ ಶಿಕ್ಷಣದ ಅವಕಾಶವನ್ನು ಕಳೆದುಕೊಂಡ ನೂರಾರು ವಿಧ್ಯಾರ್ಥಿಗಳು ಇದ್ದಾರೆ. ಪದವಿ ಪ್ರಮಾಣ ಪತ್ರವನ್ನು ಪಡೆಯಲು ಅವಕಾಶ ವಂಚಿತರು ಇನ್ನೂ ಸಾಲುಗಟ್ಟಿ ನಿಂತಿದ್ದಾರೆ. ಉದ್ಯೋಗ ನೇಮಕಾತಿಯ ಅಡಚಣೆಯನ್ನು ಎದುರಿಸುತ್ತಿದ್ದಾರೆ. ಆದರೆ ವಿಶ್ವವಿದ್ಯಾನಿಲಯವು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ನಿರಾಸಕ್ತವಾಗಿದೆ. ತಮ್ಮ ಅಗತ್ಯ ಕಾರ್ಯಗಳನ್ನು ಮರೆತು ಹೊರಗಿನ ಸಂಸ್ಥೆಗಳ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಗೆ ಸಹಕರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅವರು ದೂರಿರುತ್ತಾರೆ.

    Share Information
    Advertisement
    Click to comment

    You must be logged in to post a comment Login

    Leave a Reply