ಯೋಧರ ಬಲಿದಾನದ ಕಥೆಗಳನ್ನು ಮನೆ ಮಕ್ಕಳಿಗೆ ತಿಳಿಸಿ – ಶಾಸಕ ಕಾಮತ್

ಮಂಗಳೂರು ಫೆಬ್ರವರಿ 14: ಪುಲ್ವಾಮ ದುರ್ಘಟನೆಗೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಕದ್ರಿ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಸುಖ ನಿದ್ರೆಯ ಹಿಂದೆ ನಿದ್ದೆಗೆಟ್ಟು ಗಡಿ ಕಾಯುವ ಯೋಧರ ಪರಿಶ್ರಮವಿದೆ. ಅವರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಮೂಲಕ ಯೋಧರ ಜೊತೆ ನಾವಿದ್ದೇವೆ ಎನ್ನುವ ಸಂದೇಶ ನೀಡಬೇಕು. ಪುಲ್ವಾಮದಲ್ಲಿ ಹುತಾತ್ಮರಾದ ಎಲ್ಲಾ ಯೋಧರನ್ನೂ ನೆನೆಯುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ದೇಶದ ಗಡಿಯಲ್ಲಿ ಮಳೆ ಬಿಸಿಲೆನ್ನದೆ, ರಕ್ತ ಹೆಪ್ಪುಗಟ್ಟುವ ಚಳಿಯಲ್ಲಿ ಯೋಧರು ದೇಶವನ್ನು ಕಾಯುತಿದ್ದಾರೆ. ಅವರ ತ್ಯಾಗ, ಬಲಿದಾನದಿಂದ ನಾವೆಲ್ಲ ನಿಶ್ಚಿಂತರಾಗಿದ್ದೇವೆ. ತಾಯಿ ಭಾರತಿಯ ವೀರ ಕುವರರಿಗೆ ಭಾರತೀಯರು ನಮ್ಮ ಜೊತೆಗಿದ್ದಾರೆ ಎನ್ನುವ ಭಾವನೆಯಿದ್ದರೆ ಅವರ ಮನೋಬಲ‌ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದರು.

ನಮ್ಮ ಮಕ್ಕಳಿಗೆ ದೇಶಾಭಿಮಾನ, ತ್ಯಾಗ ಬಲಿದಾನದ ಕಥನಗಳನ್ನು ತಿಳಿಸಿ ಬೆಳೆಸಬೇಕು. ಮಕ್ಕಳ ಮನಸ್ಸಿನಲ್ಲಿ ರಾಷ್ಟ್ರೀಯ ಭಾವನೆಗಳನ್ನು ತುಂಬುವ ಕಾರ್ಯ ಕಡಿಮೆಯಾದರೆ ಈ ದೇಶಕ್ಕೆ ಭವಿಷ್ಯವಿಲ್ಲ. ಪ್ರತಿಯೊಂದು ಮಗುವಿಗೂ ಕೂಡ ಭಾರತದ ಬಗೆಗಿನ ಅಭಿಮಾನವನ್ನು ತಿಳಿಸಿಕೊಟ್ಟು ಭವ್ಯ ಭಾರತದ ನಿರ್ಮಾಣಕ್ಕೆ ಎಳೆಯ ವಯಸ್ಸಿನಲ್ಲಿಯೇ ಬುನಾದಿ ಹಾಕಿಕೊಡಬೇಕು ಎಂದರು.