MANGALORE
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಅಸಮಾಧಾನ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕವಾದ ಗೈಡೆನ್ಸ್ ವ್ಯಾಲ್ಯು ಹೆಚ್ಚಳ ಮತ್ತು ಆಸ್ತಿಯ ಮೌಲ್ಯದ ಮೇಲೆ ವಿಧಿಸುವ ತೆರಿಗೆ ಸ್ಲ್ಯಾಬ್ ಅನ್ನು ನಿಗದಿ ಪಡಿಸಲು ಪಾಲಿಕೆಯ ಪರಿಷತ್ತಿಗೆ ಅವಕಾಶ ನೀಡದೆ ಆಯುಕ್ತರು ಏಕಾಏಕಿ ಆಸ್ತಿ ತೆರಿಗೆಯ ಹೆಚ್ಚಳ ಮಾಡಿದ ಕುರಿತಂತೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಈ ಹಿಂದೆ ಆಸ್ತಿಯ ಗೈಡೆನ್ಸ್ ವ್ಯಾಲ್ಯೂ ಆಸ್ತಿ ನೋಂದಣಿಗೆ ಮಾತ್ರ ಲಗಾವು ಆಗುತ್ತಿದ್ದು ಆದರೆ ಪ್ರಸ್ತುತ ಆಸ್ತಿ ತೆರಿಗೆ ಹಾಗು ಟಿಡಿಆರ್ ಪ್ರಕ್ರಿಯೆಗೂ ಆಸ್ತಿಯ ಮೌಲ್ಯವು ಗೈಡೆನ್ಸ್ ವ್ಯಾಲ್ಯೂ ಪ್ರಕಾರ ನಿಗದಿ ಆಗುತ್ತಿದೆ. ಆದರೆ ಪ್ರಸ್ತುತ ಸರಕಾರ ನಿಗದಿ ಪಡಿಸಿದ ಗೈಡೆನ್ಸ್ ವ್ಯಾಲ್ಯೂ ಅಲ್ಲಿ ಅನೇಕ ಮುಖ್ಯ ರಸ್ತೆ ಹಾಗು ಅಡ್ಡ ರಸ್ತೆಗಳು ಬಿಟ್ಟು ಹೋಗಿದ್ದು ಪ್ರಸ್ತುತ ಇರುವ ಇರುವ ಗೈಡೆನ್ಸ್ ವ್ಯಾಲ್ಯೂ ಅವೈಜ್ಞಾನಿಕ ವಾಗಿರುತ್ತದೆ. ಈ ವಿಚಾರವನ್ನು ಗಮನದಲ್ಲಿಟ್ಟು ಈಗಾಗಲೇ ಪಾಲಿಕೆಯು ವೈಜ್ಞಾನಿಕವಾದ ಗೈಡೆನ್ಸ್ ವ್ಯಾಲ್ಯೂ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಸರಕಾರ ಸದರಿ ಪ್ರಸ್ತಾವನೆಯನ್ನು ಪರಿಗಣಿಸಬೇಕಾಗಿ ಆಗ್ರಹಿಸಿದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಆಸ್ತಿ ತೆರಿಗೆ ವಿಧಿಸಿದ್ದು ಆದರೆ ಪ್ರಸ್ತುತ ಆಸ್ತಿ ತೆರಿಗೆ ಬಹಳ ಹೆಚ್ಚಳ ವಾಗಿದ್ದು, ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ಪಾಲಿಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರಿಗೆ ಹೊರೆಯಾಗದ ರೀತಿಯಲ್ಲಿಆಸ್ತಿ ತೆರಿಗೆ ನಿಗದಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.