LATEST NEWS
ನಾಪತ್ತೆಯಾದವರ ಪತ್ತೆಗೆ ದೈವದ ಮೋರೆ ಹೋದ ಮೀನುಗಾರರ ಕುಟುಂಬ
ನಾಪತ್ತೆಯಾದವರ ಪತ್ತೆಗೆ ದೈವದ ಮೋರೆ ಹೋದ ಮೀನುಗಾರರ ಕುಟುಂಬ
ಉಡುಪಿ ಜನವರಿ 9: ಮಲ್ಪೆಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ 7 ಜನ ಮೀನುಗಾರರು ಉತ್ತರ ಭಾಗದಲ್ಲಿದ್ದಾರೆ ಎಂದು ಬೊಬ್ಬರ್ಯ ದೈವ ನುಡಿ ಕೊಟ್ಟಿದೆ.
ಡಿಸೆಂಬರ್ 13 ರಿಂದ ದಾಮೋದರ್, ರಮೇಶ್, ಹರೀಶ್, ಲಕ್ಷ್ಮಣ್, ರವಿ, ಸತೀಶ್, ಚಂದ್ರಶೇಖರ್ ಎಂಬವರು ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮೀನುಗಾರರ ಕುಟುಂಬಸ್ಥರು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.
ಮಲ್ಪೆಯ ತೊಟ್ಟಂನಲ್ಲಿರುವ ಬೊಬ್ಬರ್ಯ ದೈವಸ್ಥಾನದಲ್ಲಿ ನಡೆದ ದರ್ಶನ ಸಂದರ್ಭ ಅರಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬೊಬ್ಬರ್ಯ ದೈವದ ಪಾತ್ರಿ ಸರಕಾರದ ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ಅವರು ಗಡಿ ಪ್ರದೇಶ ದಾಟಿ ಬೇರೆ ರಾಜ್ಯಕ್ಕೆ ಹೋಗಿದ್ದಾರೆ. ಶೀಘ್ರದಲ್ಲಿ ಕಾಣೆಯಾದ ಮೀನುಗಾರರ ಬಗ್ಗೆ ಸುಳಿವು ತೋರಿಸಿಕೊಡುವುದಾಗಿ ಅಭಯ ನೀಡಿದೆ.
ಸ್ಥಳೀಯ ಮೀನುಗಾರರು ತಾವು ಮೀನು ಹಿಡಿಯಲು ಸಮುದ್ರಕ್ಕೆ ತೆರಳುವ ಮೊದಲು ಬೊಬ್ಬರ್ಯ ದೈವಕ್ಕೆ ಕೈ ಮುಗಿಯುತ್ತಾರೆ. ಹೀಗಾಗಿ ಬೊಬ್ಬರ್ಯ ದೈವ ಕೊಟ್ಟ ನುಡಿಯನ್ನು ಪಾಲಿಸುತ್ತಾರೆ.
ಕಳೆದ 28 ದಿನಗಳಿಂದ 7 ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಬೋಟ್ ಮಲ್ಪೆಗೆ ಸೇರಿದ್ದಾಗಿದ್ದು, ಅದರಲ್ಲಿ 5 ಮಂದಿ ಉತ್ತರ ಕನ್ನಡ ಹಾಗೂ ಇಬ್ಬರು ಉಡುಪಿ ಜಿಲ್ಲೆಯವರಾಗಿದ್ದಾರೆ. ಇವರನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದ್ದರೂ ಅವರನ್ನು ಪತ್ತೆಹಚ್ಚಲು ಸರ್ಕಾರದಿಂದ ಸಾಧ್ಯವಾಗಲಿಲ್ಲ.