Connect with us

UDUPI

ಕಣ್ಮರೆಯಾದವರನ್ನು ಹುಡುಕಿಕೊಡಿ ಸರ್ಕಾರಕ್ಕೆ 5 ಲಕ್ಷ ಪರಿಹಾರ ನಾವು ಕೊಡುತ್ತೇವೆ

ಕಣ್ಮರೆಯಾದವರನ್ನು ಹುಡುಕಿಕೊಡಿ ಸರ್ಕಾರಕ್ಕೆ 5 ಲಕ್ಷ ಪರಿಹಾರ ನಾವು ಕೊಡುತ್ತೇವೆ

ಉಡುಪಿ ಜನವರಿ 9: ಮಲ್ಪೆ ಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿ 25 ದಿನ ಕಳೆದ ನಂತರ ಮೀನುಗಾರರ ಕುಟುಂಬಕ್ಕೆ ಸಾಂತ್ವನ ಹೇಳಲು ಮಲ್ಪೆಗೆ ಬಂದಿದ್ದ ಮೀನುಗಾರಿಕಾ ಸಚಿವರ ವಿರುದ್ದ ಕುಟುಂಬಸ್ಥರು ಮತ್ತು ಮೀನುಗಾರರು ಹರಿಹಾಯ್ದರು.

7 ಮಂದಿ ಮೀನುಗಾರರು ನಾಪತ್ತೆಯಾಗಿ 25 ದಿನಗಳು ಕಳೆದಿವೆ. ಮೀನುಗಾರರ ಕುಟುಂಬಗಳು ಆತಂಕದಲ್ಲಿವೆ. ಇಷ್ಟಾದರೂ ಜಿಲ್ಲೆಗೆ ಭೇಟಿ ನೀಡಲು ನಿಮಗೆ ಸಮಯ ಇರಲಿಲ್ಲವೇ? ಕಡಲ ಮಕ್ಕಳ ಕಷ್ಟಸುಖ ವಿಚಾರಿಸುವುದು ನಿಮ್ಮ ಕರ್ತವ್ಯವಲ್ಲವೇ’ ಎಂದು ತರಾಟೆಗೆ ತೆಗೆದುಕೊಂಡರು. ಇಲ್ಲಿಗೆ ಗೃಹ ಸಚಿವರು ಬಂದಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರು ಬಂದಿದ್ದಾರೆ. ಮೀನುಗಾರಿಕಾ ಸಚಿವರಾದ ನೀವು ಮಾತ್ರ ಬಂದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರರನ್ನು ಸಮಾಧಾನಪಡಿಸಲು ಸಚಿವರು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಈಗಾಗಲೇ ಪೊಲೀಸರು, ನೌಕಾಪಡೆ ಅಧಿಕಾರಿಗಳು ಮೀನುಗಾರರ ಪತ್ತೆ ಮಾಡುತ್ತಿದ್ದಾರೆ. ಸಮುದ್ರದ ಒಳಗೆ ಹಾಗೂ ಹೊರಗೆ ಕಾರ್ಯಾಚರಣೆ ನಡೆಯುತ್ತಿದೆ. ಇಸ್ರೋ ಸ್ಯಾಟಲೈಟ್‌ ನೆರವು ಪಡೆಯಲು ನಿರ್ಧರಿಸಲಾಗಿದೆ. ನಾಪತ್ತೆಯಾದ ದಿನದಿಂದಲೂ ಶೋಧ ನಡೆಯುತ್ತಿದೆ. ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿಲ್ಲ ಎಂದು ಸಮಜಾಯಿಷಿ ನೀಡಿದರು.

ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಮುಖ್ಯಮಂತ್ರಿ ತಾತ್ಕಾಲಿಕವಾಗಿ 1 ಲಕ್ಷ ಪರಿಹಾರ ಘೋಷಿಸಿದ್ದಾರೆ. ನಾಳೆಯೇ ಪರಿಹಾರ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಈ ಸಂದರ್ಭ ‘ನಿಮ್ಮ ಪರಿಹಾರ ಯಾರಿಗೆ ಬೇಕು? ಮೊದಲು ಕಣ್ಮರೆಯಾದವರನ್ನು ಹುಡುಕಿಕೊಡಿ. ಮೀನುಗಾರರೆಲ್ಲ ಸೇರಿ ಸರ್ಕಾರಕ್ಕೆ 5 ಲಕ್ಷ ಪರಿಹಾರ ಕೊಡುತ್ತೇವೆ’ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Facebook Comments

comments