DAKSHINA KANNADA
ಪಶ್ಚಿಮಘಟ್ಟಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಮಿನಿ ಜಲವಿದ್ಯುತ್ ಘಟಕ
ಪಶ್ಚಿಮಘಟ್ಟಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಮಿನಿ ಜಲವಿದ್ಯುತ್ ಘಟಕ
ಪುತ್ತೂರು ಮೇ 11: ಪಶ್ಚಿಮ ಘಟ್ಟದಲ್ಲಿ ಒಂದರ ಹಿಂದೊಂದರಂತೆ ಮಿನಿ ಜಲ ವಿದ್ಯುತ್ ಘಟಕಗಳು ತಲೆ ಎತ್ತುತ್ತಿರುವುದು ಪಶ್ಚಿಮಘಟ್ಟ ನಾಶವಾಗುವುದರ ಲಕ್ಷಣಗಳನ್ನು ಸಾರುತ್ತಿದೆ.
ಈ ವಿದ್ಯುತ್ ಘಟಕಗಳ ನಿರ್ಮಾಣಕ್ಕಾಗಿ ನೂರಾರು ಎಕರೆ ಅರಣ್ಯವನ್ನು ನಾಶ ಮಾಡಲಾಗುತ್ತಿದೆ. ಆದರೆ ಇಷ್ಟೊಂದು ಅರಣ್ಯ ನಾಶ ಮಾಡಿ ನಿರ್ಮಾಣಗೊಂಡ ಜಲ ವಿದ್ಯುತ್ ಘಟಕಗಳಿಗೆ ಇದೀಗ ಕಂಟಕವೂ ಎದುರಾಗಿದೆ.
ಅರಣ್ಯದಲ್ಲಿ ನಿರಂತರ ನಡೆಯುತ್ತಿರುವ ಕಾಮಗಾರಿಗಳ ಹೂಳು ಇದೀಗ ಈ ಜಲ ವಿದ್ಯುತ್ ಘಟಕಗಳ ಡ್ಯಾಂ ಗಳಲ್ಲಿ ತುಂಬಲಾರಂಭಿಸಿದೆ. ಇದರಿಂದಾಗಿ ಡ್ಯಾಂ ಗಳಲ್ಲಿ ಸಂಗ್ರಹಗೊಳ್ಳುವ ನೀರಿನ ಮಟ್ಟವೂ ಇಳಿಮುಖವಾದರೆ, ಇನ್ನೊಂದೆಡೆ ಕಲುಷಿತ ನೀರು ಕುಡಿಯುವ ನದಿ ನೀರಿನಲ್ಲಿ ಸೇರಲಾರಂಭಿಸಿದೆ.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಶಿರಾಡಿ ಘಾಟ್ ಮಧ್ಯೆ ಇದೀಗ ಬೃಹದಾಕಾರದ ಪೈಪ್ ಲೈನ್ ಗಳು, ರಸ್ತೆಗಳು ನಿರ್ಮಾಣಗೊಳ್ಳುತ್ತಿದೆ. ಮಿನಿ ಜಲ ವಿದ್ಯುತ್ ಘಟಕದ ಹೆಸರಿನಲ್ಲಿ ಪಶ್ಚಿಮ ಘಟ್ಟ ಪ್ರದೇಶದ ತುಂಬಾ ಭೂಮಿಯನ್ನು ಅಗೆಯುವ, ಕೊರೆಯುವ ಕಾಮಗಾರಿಗಳು ಅತ್ಯಂತ ವೇಗವಾಗಿ ನಡೆಯುತ್ತಿದೆ.
ಶಿರಾಡಿಘಾಟ್ ನ ಮಧ್ಯೆ ಹರಿಯುವ ಕೆಂಪುಹೊಳೆ ಈಗಾಗಲೇ ಎಂಟಕ್ಕೂ ಮಿಕ್ಕಿದ ಮಿನಿ ಜಲ ವಿದ್ಯುತ್ ಘಟಕಗಳು ಕಾರ್ಯಾಚರಿಸುತ್ತಿದ್ದು, ಇದೀಗ ಮತ್ತೆ ಹಲವು ಸೇರ್ಪಡೆಗೊಳ್ಳಲಾರಂಭಿಸಿದೆ. ಇದಕ್ಕಾಗಿ ಶಿರಾಡಿ ಘಾಟ್ ಹಸಿರನ್ನು ಬೋಳಿಸುವ ಕಾರ್ಯ ಅತ್ಯಂತ ವೇಗವಾಗಿ ನಡೆಯುತ್ತಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಶಿರಾಡಿ ಘಾಟ್ ನ್ನು ಈ ಘಟಕಗಳಿಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಗಳು ಸೀಳಿ ಹೋಗುತ್ತಿದೆ.
ಇಲ್ಲದೆ ಮೀಸಲು ಅರಣ್ಯದಲ್ಲಿ ಎಗ್ಗಿಲ್ಲದೆ ಮರಗಳ ಮಾರಣಹೋಮವೂ ನಡೆಯುತ್ತಿದೆ. ಇದೆಲ್ಲದರ ಪರಿಣಾಮ ಇದೀಗ ಜಲ ವಿದ್ಯುತ್ ಘಟಕಗಳ ಮೇಲೆಯೇ ಆಗಲಾರಂಭಿಸಿದೆ. ಘಟ್ಟ ಪ್ರದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಕಾಮಗಾರಿಗಳ ಹೂಳು ಇದೀಗ ವಿದ್ಯುತ್ ಘಟಕಗಳ ನೀರು ಸಂಗ್ರಹ ಡ್ಯಾಂಗಳಲ್ಲಿ ತುಂಬುತ್ತಿವೆ. ಇದರಿಂದಾಗಿ ಡ್ಯಾಂಗಳ ತುಂಬಾ ಹೂಳು ತುಂಬಲಾರಂಭಿಸಿದ್ದು, ನೀರಿನ ಸಂಗ್ರಹ ಮಟ್ಟ ಗಣನೀಯವಾಗಿ ಕುಸಿಯುವಂತಾಗಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಡ್ಯಾಂ ಗಳನ್ನೇ ಕೊಚ್ಚಿ ಹಾಕುವಂತಹ ಸ್ಥಿತಿಯನ್ನೂ ನಿರ್ಮಿಸಲಿದೆ ಎನ್ನುವ ಆತಂಕವೂ ವ್ಯಕ್ತವಾಗುತ್ತಿದೆ.
ಅತ್ಯಂತ ಸ್ವಚ್ಛಂದವಾಗಿ ಹರಿಯುತ್ತಿದ್ದ ಕೆಂಪುಹೊಳೆ ಇದೀಗ ಈ ಹೂಳುಗಳಿಂದಾಗಿ ಕಲುಷಿತಗೊಂಡಿವೆ. ಒಂದೆಡೆ ಎತ್ತಿನಹೊಳೆ ಯೋಜನೆಯ ಕಾಮಗಾರಿಯಿಂದಾಗಿ ನೀರಿನ ಹರಿವು ಗಣನೀಯ ಇಳಿಕೆ, ಇನ್ನೊಂದೆಡೆ ಹೂಳುಗಳಿಂದಾಗಿ ಡ್ಯಾಂ ತುಂಬಾ ಹೂಳು ತುಂಬುವಂತಾಗಿದೆ.
ಬೇಸಿಗೆಯಲ್ಲಿ ಈ ಜಲ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯ ಪ್ರಕ್ರಿಯೆ ನಿಲ್ಲಿಸುವುದರ ಪರಿಣಾಮ ಡ್ಯಾಂ ಮೂಲಕ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ. ಇದರಿಂದಾಗಿ ಕಲುಷಿತ ನೀರು, ನದಿ ನೀರಿಗೆ ಸೇರುವುದರಿಂದಾಗಿ ಈ ನೀರನ್ನೇ ತಮ್ಮ ಜೀವನಾಧಾರಕ್ಕಾಗಿ ಬಳಸುತ್ತಿರುವ ಜನರಿಗೆ ತೊಂದರೆಯಾಗಲಾರಂಭಿಸಿದೆ. ಜಿಲ್ಲಾಡಳಿತ ಒಂದೋ ಡ್ಯಾಂ ಇರುವ ಪ್ರದೇಶಗಳಲ್ಲಿ ಸಂಗ್ರಹವಾಗುವ ಹೂಳನ್ನು ಎತ್ತುವ ಪ್ರಯತ್ನ ಮಾಡಬೇಕು, ಇಲ್ಲದೆ ಈ ಘಟಕಗಳನ್ನೇ ಮುಚ್ಚಿ ನೀರು ನಿರಂತರವಾಗಿ ಹರಿಯುವಂತ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ.