ಸರಣಿ ನಾಗರ ಹಾವುಗಳ ಸಾವಿನ ಕಾರಣ ಬೆನ್ನತ್ತಿದ ಊರ ಮಂದಿಗೆ ಕಾದಿತ್ತು ವಿಸ್ಮಯ !

ಪುತ್ತೂರು ಮೇ 11: ಆ ಊರಿನ ಜನರಲ್ಲಿ ಇತ್ತೀಚಿನ ವರ್ಷಗಳಲ್ಲಿ ನೆಮ್ಮದಿ ಬದುಕೆಂಬುದೇ ನಷ್ಟವಾಗಿ ಹೋಗಿತ್ತು. ಅಲ್ಲಲ್ಲಿ ಅಪಮೃತ್ಯುಗಳು, ಅತ್ಯಂತ ನಂಬಿಕೆಯ ನಾಗಗಳ ಸಾವುಗಳು ಅಲ್ಲಿನ ಜನರನ್ನು ನಿದ್ದೆಗೆಡಿಸಿತ್ತು. ನಾಗಗಳ ಸಾವನ್ನು ಬೆನ್ನತ್ತಿ ಹೋದ ಆ ಊರಿನ ಜನರಿಗೆ ವಿಸ್ಮಯವೇ ಕಾದಿತ್ತು.

ಊರಿನಲ್ಲಿ ನಡೆಯುತ್ತಿರುವ ಇಂಥಹ ಗಂಡಾಂತರಗಳಿಗೆ 300 ವರ್ಷಗಳಿಂದ ಪಾಳು ಬಿದ್ದ ಆ ದೈವಸ್ಥಾನವೇ ಕಾರಣ ಎಂದು ತಿಳಿದಾಗಿ ಊರಿನ ಜನರಿಗೆ ಬರ ಸಿಡಿಲೇ ಬಡಿದಿತ್ತು. ಬನ್ನಿ ಹಾಗಾದರೆ ಯಾವುದಾ ಊರು, ಏನಿದು ದೈವದ ಸೇಡು ಅನ್ನೋದನ್ನು ಹೇಳ್ತೀವಿ ಈ ಸ್ಟೋರಿ ನೋಡಿ.

ಹೌದು ಈ ಘಟನೆ ನಡೆದಿರೋದು ಪರಶುರಾಮನ ಸೃಷ್ಠಿಯ ತುಳುನಾಡಿನಲ್ಲಿ. ತುಳುನಾಡಿನಲ್ಲಿ ದೇವರಿಗಿಂತಲೂ ದೈವಗಳಿಗೇ ಹೆಚ್ಚು ಮಹತ್ವ. ದೈವಗಳ ಜೊತೆಗೆ ಇಲ್ಲಿ ಮಣ್ಣು ನಾಗನಿಗೆ ಸೇರಿದ್ದು ಎನ್ನುವ ನಂಬಿಕೆಯೂ ಇದೆ. ಈ ಕಾರಣಕ್ಕಾಗಿಯೇ ಇಲ್ಲಿನ ಜನ ದೇವರಿಗಿಂತಲೂ ದೈವಗಳ ಬಗ್ಗೆ ಅಪಾರ ಭಕ್ತಿ, ನಂಬಿಕೆ ಹಾಗೂ ಭಯವನ್ನೂ ಹೊಂದಿದ್ದಾರೆ. ಇದೇ ಕಾರಣಕ್ಕಾಗಿಯೇ ಇಲ್ಲಿನ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ದೈವ ಸ್ಥಾನಗಳಿವೆ.

ವರ್ಷಕ್ಕೊಮ್ಮೆ ಇಲ್ಲಿ ಈ ದೈವಗಳಿಗೆ ಕೋಲ, ತಂಬಿಲ ನಡೆಸೋದು ಇಲ್ಲಿನ ಜನರ ವಾಡಿಕೆಯೂ ಆಗಿದೆ. ನಂಬಿದವರಿಗೆ ಇಂಬು ಕೊಡುವೆ ಎನ್ನುವ ಇಲ್ಲಿನ ದೈವಗಳ ನುಡಿಯನ್ನು ನಂಬಿಕೊಂಡಿರುವ ಇಲ್ಲಿನ ಜನ ಚಾಚೂ ತಪ್ಪದೇ ತಮ್ಮ ಕುಟುಂಬ ದೈವಗಳ ಆರಾಧನೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ತುಳುನಾಡಿನಲ್ಲಿ 400 ಕ್ಕೂ ಮಿಕ್ಕಿದ ದೈವಗಳ ಆರಾಧನೆ ನಡೆಯುತ್ತಿರುವುದೇ ಇಲ್ಲಿನ ಜನರ ದೈವಗಳ ಮೇಲಿನ ಭಯ-ಭಕ್ತಿಗೆ ನಿದರ್ಶನವೂ ಆಗಿದೆ. ಇಂಥ ಭಯ-ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ದೈವಗಳನ್ನು ಕಾರಣಾಂತರಗಳಿಂದ ಮರೆತು ಬಿಟ್ಟ ಆ ಊರಿನ ಜನರ ಕಥೆಯೇ ಇದು.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಹೆಚ್ಚಾದ ಜನರ ಅಪಮೃತ್ಯುಗಳು, ತುಳುನಾಡಿನ ನಂಬಿಕೆಯ ಮೂಲಧಾರವಾದ ನಾಗಗಳ ಸಾವು ಇಲ್ಲಿನ ಜನರನ್ನು ವಿಚಲಿತರನ್ನಾಗಿ ಮಾಡಿತ್ತು. ಪೆರ್ನೆಯಲ್ಲಿ 2013 ರಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ನಡೆದ ದುರ್ಘಟನೆಯಲ್ಲಿ ಈ ಗ್ರಾಮಕ್ಕೆ ಸೇರಿದ 11 ಜನ ಸಾವನ್ನಪ್ಪಿದ್ದರು.

ಅಲ್ಲದೆ ಬಾವಿಗೆ ಬಿದ್ದು ಸಾವು, ಆತ್ಮಹತ್ಯೆ, ಅಫಘಾತದಂತಹ ಹಲವು ಘಟನೆಗಳು ಇಲ್ಲಿ ನಿರಂತರವಾಗಿ ನಡೆಯಲಾರಂಭಿಸಿತ್ತು. ಈ ನಡುವೆ ಕಳೆದ ಆರು ತಿಂಗಳ ಒಳಗೆ ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳಲ್ಲಿ 14 ನಾಗರ ಹಾವುಗಳು ಆಕಸ್ಮಿಕವಾಗಿ ಸಾವಿಗೀಡಾಗಿರುವುದು ಇಲ್ಲಿನ ಜನರ ನಿದ್ದೆಗೆಡಿಸಿತ್ತು.

ತುಳುನಾಡಿನ ಭೂಮಿಯ ಒಡೆಯನಂತೆ ಆರಾಧಿಸಲ್ಪಡುತ್ತಿರುವ ನಾಗಗಳ ಸಾವಿನಿಂದ ಊರಿಗೆ ಗಂಡಾಂತರ ಬರಲಿದೆ ಎನ್ನುವುದನ್ನು ಮನಗಂಡ ಈ ಊರಿನ ಕೆಲವು ಮಂದಿ ಸೇರಿ ನಾಗಗಳ ಸಾವಿನ ಕಾರಣವನ್ನು ಹುಡುಕಿಕೊಂಡು ಹೊರಟರು.ನಾಗ, ದೈವ, ದೇವರುಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ಅತ್ಯಂತ ನಿಖರವಾಗಿ ಹೇಳಬಲ್ಲ ಅಷ್ಟಮಂಗಲ ಪ್ರಶ್ನೆಯನ್ನು ಕೇಳಿ ನಾಗಗಳ ಸಾವಿನ ರಹಸ್ಯ ತಿಳಿಯಲು ಹೊರಟ ಈ ಊರಿನ ಜನರಿಗೆ ಅಚ್ಚರಿಯ ಹಾಗೂ ವಿಸ್ಮಯಕಾರಿಯಾಗ ಕೆಲವು ಅಂಶಗಳು ಬೆಳಕಿಗೆ ಬಂದಿದೆ.

ಅಷ್ಟಮಂಗಲ ಪ್ರಶ್ನೆಗಾಗಿ ಖ್ಯಾತ ಜೋತಿಷ್ಯಿಗಳಾದ ಕೆ.ವಿ.ಗಣೇಶ್ ಭಟ್ ಮುಳಿಯ ಅವರನ್ನು ಸಂಪರ್ಕಿಸಿ ಪ್ರಶ್ನೆಗೆ ಗ್ರಾಮಸ್ಥರು ದಿನವನ್ನೂ ನಿಗದಿಪಡಿಸುತ್ತಾರೆ. ಗ್ರಾಮದಲ್ಲಿ ಅದ್ದೂರಿಯಾಗಿ ಉತ್ಸವಾದಿಗಳು ನಡೆಯುತ್ತಿದ್ದ 500 ವರ್ಷಗಳ ಇತಿಹಾಸ ಹೊಂದಿರುವ ದೈವಸ್ಥಾನವೊಂದು ಕಾಡಿನೊಳಗೆ ಪಾಳು ಬಿದ್ದಿದೆ. ಇದಕ್ಕೆ ಸಂಬಂಧಪಟ್ಟ ಭಂಡಾರದ ಮನೆಯೂ ನೆಲಸಮವಾಗಿದೆ.

ಆ ಮನೆಯಲ್ಲಿದ್ದ ದೈವದ ಮೂರ್ತಿಗಳೂ ಕೂಡಾ ಮಣ್ಣಿನಡಿಗೆ ಸೇರಿವೆ. ಈ ದೈವಸ್ಥಾನದ ಪುನರುತ್ಥಾನವೇ , ಗ್ರಾಮದ ಪುನರುತ್ಥಾನಕ್ಕೆ ಕಾರಣವಾಗಬಹುದು ಎನ್ನುವ ವಿಚಾರವನ್ನೂ ಅಷ್ಟಮಂಗಲ ಪ್ರಶ್ನೆಯ ಮೂಲಕ ಗ್ರಾಮಸ್ಥರು ಕಂಡುಕೊಂಡಿದ್ದರು. ಅಷ್ಟಮಂಗಲ ಪ್ರಶ್ನೆಯ ಪ್ರಕಾರ ಸೂಚಿಸಿದ್ದರು. ಪ್ರಶ್ನೆಯಲ್ಲಿ ತಿಳಿದು ಬಂದಂತೆ, ತಿಳಿಸಿದಂತೆ ನಿರ್ದಿಷ್ಟ ಕಾಡಿನಲ್ಲಿ ತಪಾಸಣೆ ನಡೆಸಿದಾಗ ಮರ-ಗಿಡಗಳು ಬೆಳೆದಿರುವ ಸ್ಥಿತಿಯಲ್ಲಿ ದೈವ ಸ್ಥಾನದ ಕಟ್ಟಡದ ಪಳಿಯುಳಿಕೆಗಳು ಕಂಡು ಬಂದಿದೆ.

ಪಿಲಿ ಚಾಮುಂಡಿ, ಕೊರತ್ತಿ ಹಾಗೂ ಉಳ್ಳಾಕ್ಲು ದೈವದ ಮೂರು ಗುಡಿಗಳು. ಕಾಲಾಂತರದಲ್ಲಿ ಶಿಥಿಲಗೊಂಡು ಕೇವಲ ಗುಡಿಯ ಪಂಚಾಂಗ ಮಾತ್ರ ಮರಗಿಡಗಳ ಮಧ್ಯೆ ಗೋಚರಿಸಿತ್ತು. ಇದೇ ವೇಳೆಗೆ ದೈವಸ್ಥಾನಕ್ಕೆ ಸಂಬಂಧಪಟ್ಟ ಭಂಡಾರ ಮನೆಯ ಎಲ್ಲಿದೆ ಎಂಬ ಬಗ್ಗೆ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ ಸಂದರ್ಭದಲ್ಲಿ ಜೋತಿಷ್ಯರೇ ಪ್ರಶ್ನೆಯ ಮೂಲಕ ಸಂದೇಹ ಪರಿಹರಿಸಿದ್ದಾರೆ. ಆ ಪ್ರಕಾರ ಪೆರ್ನೆ ಗ್ರಾಮದ ಅತ್ತಜಾಲು ಎಂಬಲ್ಲಿ ನಾಮಾವಶೇಷಗೊಂಡ ಮನೆಯೊಂದನ್ನು ಅಗೆದಾಗ ದೈವಗಳಿಗೆ ಸಂಬಂಧಪಟ್ಟ ಮೊಗ( ಮುಖವಾಡ) ಗಳು, ದೈವದ ಖಡ್ಗ, ದೀಪ ಮೊದಲಾದುವುಗಳು ಪತ್ತೆಯಾಗಿದೆ.

ಈ ದೈವಸ್ಥಾನದ ಅಜೀರ್ಣಾವಸ್ಥೆಯ ಬಳಿಕ ಭಂಡಾರದ ಮನೆಯಲ್ಲೂ ಹಲವು ರೀತಿಯ ವೆತ್ಯಾಸಗಳು ಕಂಡು ಬಂದಿದ್ದವು. ಮನೆಯ ಯಜಮಾನ ಪತ್ನಿ ಹಾಗೂ ಮಗಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ ಮಗನೊಬ್ಬ ಅಫಘಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ. ಈ ನಡುವೆ ಯಜಮಾನನೂ ಅನಾರೋಗ್ಯ ಹೊಂದಿ ಸಾವನ್ನಪ್ಪಿದ್ದರು.

ಯಜಮಾನನ ಆರು ಮಂದಿ ಮಕ್ಕಳಲ್ಲಿ ಮೂವರು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದರೆ, ಇನ್ನು ಮೂವರು ಮಕ್ಕಳು ಈ ಮನೆಯಲ್ಲಿ ನೆಮ್ಮದಿಯಿಲ್ಲ ಎನ್ನುವ ಕಾರಣಕ್ಕೆ ಮನೆ ಬಿಟ್ಟು ಕೆದಿಲ ಗ್ರಾಮಕ್ಕೆ ವಲಸೆ ಹೋಗಿದ್ದರು. ಮನೆಯಲ್ಲಿದ್ದ ಸದಸ್ಯರಿಗೆ ಆ ಮನೆಯಲ್ಲಿ ದೈವಗಳ ಭಂಡಾರವಿರುವುದು ಗೊತ್ತಿದ್ದರೂ, ಅದು ಊರಿಗೆ ಸಂಬಂಧಪಟ್ಟ ದೈವಗಳದ್ದು ಎನ್ನುವುದು ಗೊತ್ತಿರಲಿಲ್ಲ.

ಆ ಕಾರಣಕ್ಕಾಗಿಯೇ ದೈವಗಳಿಗೆ ತಂಬಿಲವನ್ನು ನೀಡುವುದನ್ನು ಬಿಟ್ಟು ಉಳಿದ ಕಾರ್ಯಗಳನ್ನು ನಡೆಸುತ್ತಿರಲಿಲ್ಲ. ಮನೆಯ ಹಿರಿಯ ವ್ಯಕ್ತಿ ಸಾವನ್ನಪ್ಪಿದ ಬಳಿಕ ಮನೆ ಪಾಳು ಬಿದ್ದಿದ್ದು, ಮನೆಯ ಜೊತೆಗೆ ಆರಾಧಿಸಿಕೊಂಡು ಬರಲಾಗುತ್ತಿದ್ದ ದೈವದ ಮುಖವಾಡ ಸೇರಿದಂತೆ ಇತರ ಆಭರಣಗಳು ಮಣ್ಣು ಪಾಲಾಗಿದ್ದವು.

ಭಂಡಾರದ ಮನೆಯಲ್ಲಿ ಸಿಕ್ಕಿದ ದೈವಗಳು ಪೆರ್ನೆ ಹಾಗೂ ಬಿಳಿಯೂರು ಗ್ರಾಮಕ್ಕೆ ಸಂಬಂಧಪಟ್ಟಿದ್ದು ಎನ್ನುವುದು ಇದೀಗ ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದಿದೆ. ಇದೀಗ ಈ ದೈವಗಳ ಆರಾಧನೆಗೆ ಈ ಊರಿನ ಜನ ನಿರ್ಧರಿಸಿದ್ದಾರೆ. ತನ್ನನ್ನು ಮರೆತ ಜನರಿಗೆ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಿದ ದೈವದ ಸೇಡು ಇದೀಗ ಆ ಊರಿನ ಜನರಲ್ಲಿ ದೈವ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.

VIDEO