National
ಆಗಸದಿಂದ ಬಿದ್ದ ವಸ್ತು – ಸ್ಥಳೀಯರಲ್ಲಿ ಆತಂಕ

ಜೈಪುರ್, ಜೂನ್ 20:ಉಲ್ಕಾಶಿಲೆ ಮಾದರಿಯ ವಸ್ತುವೊಂದು ಆಗಸದಿಂದ ನೆಲಕ್ಕೆ ಬಿದ್ದಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ರಾಜಸ್ಥಾನದ ಸಾಂಚೋರ್ ಜಿಲ್ಲೆಯಲ್ಲಿ ನಡೆದಿದೆ.
2.7 ಕೆ.ಜಿ ತೂಕವಿರುವ ಲೋಹದ ವಸ್ತು ಇದಾಗಿದ್ದು ವಸ್ತು ಬಿದ್ದ ರಭಸಕ್ಕೆ ಭೂಮಿಯಲ್ಲಿ ಒಂದು ಫೀಟ್ ಆಳಕ್ಕೆ ಹೊಂಡ ಬಿದ್ದಿದೆ. ಇದು ಬಿದ್ದ ರಭಸಕ್ಕೆ ಉಂಟಾದ ಶಬ್ದ ಎರಡು ಕಿಮೀ ವ್ಯಾಪ್ತಿಯಲ್ಲಿ ಕೇಳಿದ್ದು ಜನರಲ್ಲಿ ಏನೋ ಅನಾಹುತ ಆಗಿದೆ ಎನ್ನುವ ಭಯ ಕಾಡಿತ್ತು. ಬಳಿಕ ಪೊಲೀಸರು ಮತ್ತು ಸ್ಥಳೀಯಾಡಳಿತದ ಅಧಿಕಾರಿಗಳು ಬಂದು ಪರಿಶೀಲಿಸಿದಾಗ ವಸ್ತು ಬಿಸಿಯಾಗಿರುವುದು ಕಂಡುಬಂತು. ವಸ್ತುವಿನ ಬಿಸಿ ತಣ್ಣಗಾದ ಬಳಿಕ ಅದನ್ನು ಜಾರ್ ನಲ್ಲಿ ಸಂಗ್ರಹಿಸಿ ಸಾಂಚೋರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.

ಮೇಲ್ನೋಟಕ್ಕೆ ಲೋಹದ ವಸ್ತು ಉಲ್ಕಾಶಿಲೆಯ ಒಂದು ತುಂಡುವಿಂತೆ ಕಂಡುಬರುತ್ತದೆ. ಹೆಚ್ಚಿನ ಪರೀಕ್ಷೆಗಾಗಿ ವಸ್ತುವನ್ನು ಉನ್ನತ ಮಟ್ಟದ ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ, ವಸ್ತುವಿನಲ್ಲಿ ಲೋಹದ ಅಂಶಗಳು ಇರುವುದು ಪತ್ತೆಯಾಗಿದೆ. ಜರ್ಮೇನಿಯಂ, ನಿಕ್ಕೆಲ್, ಪ್ಲಾಟಿನಂ ಮತ್ತು ಕಬ್ಬಿಣದ ಅಂಶಗಳನ್ನು ವಸ್ತು ಹೊಂದಿದೆ ಎಂಬುದಾಗಿ ತಹಸೀಲ್ದಾರ್ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.
ಜೀಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾದ ಅಹ್ಮದಾಬಾದ್ ಮತ್ತು ಜೈಪುರ ಕಚೇರಿಯ ಅಧಿಕಾರಿಗಳು ಸಂಪರ್ಕಿಸಿದ್ದು ಲೋಹದ ವಸ್ತುವಿನ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಭೂಮಿಯ ಮೇಲೆ ವರ್ಷದಲ್ಲಿ ಅಂದಾಜು 60 ಸಾವಿರದಷ್ಟು ಉಲ್ಕಾಶಿಲೆಗಳು ಬೀಳುತ್ತವೆ ಎನ್ನಲಾಗುತ್ತಿದೆ.