LATEST NEWS
ಕುದ್ರೋಳಿ ದಸರಾದಲ್ಲಿ ಮಟ್ಕಾ ಸೋಡಾ ವಿಡಿಯೋ ವೈರಲ್ – ಪಾಲಿಕೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ದಾಳಿ

ಮಂಗಳೂರು ಅಕ್ಟೋಬರ್ 23: ಕುದ್ರೋಳಿ ದೇವಸ್ಥಾನ ಪರಿಸರದಲ್ಲಿ ಸ್ವಚ್ಚತೆ ಕಾಪಾಡದೇ ಮಟ್ಕಾ ಸೋಡಾ ಮಾರಾಟ ಮಾಡುತ್ತಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಇದೀಗ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಟ್ಕಾ ಮಳಿಗೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು ದಸರಾ ಹಿನ್ನಲೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ದ್ವಾರದ ಬಳಿಯಲ್ಲಿ ಮಟ್ಕಾ ಸೋಡಾ ಸ್ಟಾಲ್ ಹಾಕಲಾಗಿತ್ತು. ಸ್ಟಾಲ್ ನಲ್ಲಿ ರಾತ್ರಿ ವೇಳೆ ಭರಪೂರ ವ್ಯಾಪಾರ ನಡೆಯುತ್ತಿದ್ದು, ಈ ನಡುವೆ ಸ್ಥಳೀಯರೊಬ್ಬರು ಸ್ಟಾಲ್ ನಲ್ಲಿನ ಸ್ವಚ್ಚತೆ ಬಗ್ಗೆ ವಿಡಿಯೋ ಒಂದನ್ನು ಮಾಡಿದ್ದರು, ಮಳಿಗೆಯವರು ಮಟ್ಕಾ ಪಾಟ್ ಗಳನ್ನು ತೊಳೆಯುತ್ತಿದ್ದ ನೀರು ತೀರಾ ಕಪ್ಪು ಕಪ್ಪಗೆ ಆಗಿದ್ದು ವಿಡಿಯೋದಲ್ಲಿ ದಾಖಲಾಗಿತ್ತು. ಅಲ್ಲದೆ, ಸ್ಟಾಲ್ ಸಿಬಂದಿ ತಂಬಾಕು ಜಗಿದು ಅಲ್ಲಿಯೇ ಉಗುಳುತ್ತಿದ್ದರು. ಅದನ್ನು ಬಾಯಿಂದ ತೆಗೆದು ಕೈತೊಳೆದ ನೀರಿನಲ್ಲೇ ಮಟ್ಕಾ ಪಾಟ್ ಗಳನ್ನು ತೊಳೆಯುತ್ತಿದ್ದರು. ಆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ, ಶುಚಿತ್ವ ಇಲ್ಲದ ಮಟ್ಕಾ ಸೋಡಾ ಬಗ್ಗೆ ಭಾರೀ ಆಕ್ರೋಶ ಕೇಳಿಬಂದಿತ್ತು.

ವಿಡಿಯೋ ವೈರಲ್ ಬೆನ್ನಲ್ಲೇ ಸೋಮವಾರ ಮಧ್ಯಾಹ್ನ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಮಟ್ಕಾ ಸೋಡಾ ಸ್ಟಾಲ್ ನಲ್ಲಿದ್ದ ಪಾಟ್ ಸೇರಿ ಎಲ್ಲ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು ಶುಚಿತ್ವ ಕಾಪಾಡದೆ ಸ್ಟಾಲ್ ಗಳನ್ನು ಹಾಕದಂತೆ ತಾಕೀತು ಮಾಡಿದ್ದಾರೆ. ಕುದ್ರೋಳಿ ನವರಾತ್ರಿ ಉತ್ಸವಕ್ಕೆ ಬಹಳಷ್ಟು ಸ್ಟಾಲ್ ಗಳನ್ನು ಹಾಕಿದ್ದು ಇತರೇ ಸ್ಟಾಲ್ ಗಳಲ್ಲೂ ಶುಚಿತ್ವ ಬಗ್ಗೆ ಪರಿಶೀಲನೆ ಮಾಡಿದ್ದಾರೆ.