LATEST NEWS
ಮಂಗಳೂರು ಮಹಾನಗರಪಾಲಿಕೆಗೆ ನವೆಂಬರ್ 12 ರಂದು ಚುನಾವಣೆ ನವೆಂಬರ್ 14 ರಂದು ಫಲಿತಾಂಶ

ಮಂಗಳೂರು ಮಹಾನಗರಪಾಲಿಕೆಗೆ ನವೆಂಬರ್ 12 ರಂದು ಚುನಾವಣೆ ನವೆಂಬರ್ 14 ರಂದು ಫಲಿತಾಂಶ
ಮಂಗಳೂರು ಅಕ್ಟೋಬರ್ 20 : ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ ಗಳೂ ಸೇರಿದಂತೆ ರಾಜ್ಯದ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ನವಂಬರ್ 12ರಂದು ಚುನಾವಣೆ ನಡೆಯಲಿದ್ದು ನವಂಬರ್ 14ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಇವುಗಳ ಜೊತೆಯಲ್ಲಿ 5 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಸಹ ನಡೆಯಲಿದೆ. ಚುನಾವಣೆ ಘೋಷಣೆ ಆಗಿರುವ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು ಇದು ನವಂಬರ್ 14ರವರೆಗೆ ಜಾರಿಯಲ್ಲಿರುತ್ತದೆ.

ಅಕ್ಟೋಬರ್ 24ರಂದು ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ನಾಮಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿರುತ್ತದೆ. ನವಂಬರ್ 02ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ನವಂಬರ್ 04 ಕೊನೆಯ ದಿನವಾಗಿರುತ್ತದೆ. ನವಂಬರ್ 12ರಂದು ಅಗತ್ಯವಿರುವ ಕಡೆಗಳಲ್ಲಿ ಮತದಾನ ನಡೆಯಲಿದೆ. ಮರುಮತದಾನ ಅಗತ್ಯವಿರುವ ಕಡೆಗಳಲ್ಲಿ ನವಂಬರ್ 13ರಂದು ಮತದಾನ ನಡೆಯಲಿದೆ. ನವಂಬರ್ 14ರ ಗುರುವಾರದಂದು ಆಯಾ ತಾಲೂಕುಗಳ ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ನಡೆಯಲಿದ್ದು ಅದೇ ದಿನ ಫಲಿತಾಂಶವೂ ಪ್ರಕಟಗೊಳ್ಳಲಿದೆ.
ಮಂಗಳೂರು ಮಹಾ ನಗರ ಪಾಲಿಕೆಗೆ ಚುನಾವಣೆ ಘೋಷಣೆಯಾಗಿದ್ದು ಅ.20 ರಿಂದ ಅನ್ವಯವಾಗುವಂತೆ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಅಳವಡಿಸಿದ ಜಾಹೀರಾತು ಫಲಕವನ್ನು ತಕ್ಷಣ ತೆರವುಗೊಳಿಸುವಂತೆ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ತಿಳಿಸಿದ್ದಾರೆ