ಆಗುಂಬೆ ಘಾಟಿ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತ

ಉಡುಪಿ ಅಕ್ಟೋಬರ್ 19 : ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟ್ ನಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಈಗ ಮಳೆ ಕಡಿಮೆಯಾದ್ದರಿಂದ ಹಾಗೂ ರಸ್ತೆ ದುರಸ್ಥಿ ಸಂಪೂರ್ಣಗೊಂಡಿದ್ದರಿಂದ ಆಗುಂಬೆ ಘಾಟ್ ನಲ್ಲಿ ಎಲ್ಲಾ ರೀತಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯಲ್ಲಿ ಅತಿಯಾಗಿ ಮಳೆ ಬಂದು ಕೆಲವು ತಿರುವು ಗುಡ್ಡ ಕುಸಿದಿದ್ದು, ದುರಸ್ತಿಗಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು, ತದನಂತರದಲ್ಲಿ ದುರಸ್ತಿ ಕಾರ್ಯ ಮುಗಿದ ನಂತರ ಸಾರ್ವಜನಿಕ ಹಿತ ದೃಷ್ಟಿಯಿಂದ ಸುಗಮ ಸಂಚಾರಕ್ಕಾಗಿ ಲಘು ವಾಹನಗಳಾದ ಮಿನಿ ಬಸ್‍ಗಳು, ಜೀಪು, ವ್ಯಾನ್, ಕಾರ್‍ಗಳು ಮತ್ತು ದ್ವಿಚಕ್ರ ವಾಹನಗಳೊಂದಿಗೆ ಎಲ್.ಸಿ.ವಿ ವಾಹನಗಳ ಸಂಚಾರಕ್ಕೆ ಮಾತ್ರ ಮುಕ್ತಗೊಳಿಸಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು.

ಪ್ರಸ್ತುತ ಈ ರಸ್ತೆಯಲ್ಲಿ ಯಾವುದೇ ಗುಡ್ಡ ಕುಸಿತವಾಗಲಿ, ಮರಗಳು ಉರುಳಿ ಸಂಚಾರಕ್ಕೆ ಅಡ್ಡಿಯಾಗುವ ಸಂಭವ ಇರುವುದಿಲ್ಲವಾದ್ದರಿಂದ, ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯಲ್ಲಿ ಲಘು ವಾಹನಗಳು ಹಾಗೂ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿ, ಮಾರ್ಚ್ 30 ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

comments