LATEST NEWS
ಮಂಗಳೂರು – ನಗರದ ಹಲವೆಡೆ ಪಾಲಿಕೆಯಿಂದ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ

ಮಂಗಳೂರು ಮೇ 22:ಮಂಗಳೂರಿನಲ್ಲಿ ಮತ್ತೆ ಬೀದಿ ಬದಿ ವ್ಯಾಪಾರಿಗಳ ಮೇಲೆ ಜೆಸಿಬಿ ಘರ್ಜಿಸಿದೆ. ಮಂಗಳೂರಿನ ನಗರದ ಹಲವೆಡೆ ಮಹಾನಗರಪಾಲಿಕೆಯ ಅಧಿಕಾರಿಗಳು ಗುರುವಾರ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು ತೆರವು ಕಾರ್ಯಾಚರಣೆಗೆ ಬಂದ ಅಧಿಕಾರಿಗಳ ವಿರುದ್ದ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ನಗರಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರದ ನಿಯಮ ಮತ್ತು ಕಾನೂನುಗಳನ್ನು ಪಾಲಿಸುತ್ತಿಲ್ಲ, ನಗರಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಜನರ ಪ್ರತಿನಿಧಿಗಳು ಇಲ್ಲ. ನಗರಪಾಲಿಕೆಯ ವ್ಯಾಪ್ತಿಯಲ್ಲಿ ಪಟ್ಟಣ ವ್ಯಾಪಾರ ಸಮಿತಿ ಅಸ್ತಿತ್ವದಲ್ಲಿಲ್ಲ. ಬೀದಿಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಕುಂದುಕೊರತೆ ನಿವಾರಣಾ ಸಮಿತಿಯು ಇಲ್ಲ. ಮೇಲ್ಮನವಿ ಪ್ರಾಧಿಕಾರವೂ ಅಸ್ತಿತ್ವದಲ್ಲಿ ಇಲ್ಲದಿರುವಾಗ ಕಾರ್ಯಾಚರಣೆ ನಡೆಸಿರುವುದು ಅಧಿಕಾರಿಗಳ ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಸಿಐಟಿಯು ಟೀಕಿಸಿದೆ.

ಸ್ಟೇಟ್‌ಬ್ಯಾಂಕ್ ಬಳಿ ಸಂಚಾರಿ ಸಮಸ್ಯೆಗಳಾಗಲಿ, ಸಾರ್ವಜನಿಕರ ದೂರು ಇಲ್ಲದಿರುವಾಗ ಅಧಿಕಾರಿಗಳು ದಾಳಿ ನಡೆಸುತ್ತಿರುವುದು ಅನುಮಾನ ಬರುತ್ತಿದೆ. ಕಂಟೋನ್ಮೆಂಟ್ ವಾರ್ಡಲ್ಲಿ ನಿರ್ಮಾಣಗೊಂಡಿರುವ ಬೀದಿ ವ್ಯಾಪಾರ ವಲಯ ಅಸಮರ್ಪಕವಾಗಿದೆ ಮತ್ತು ಅವೈಜ್ಞಾನಿಕವಾಗಿದೆ. ಹತ್ತಿರದ ವಾರ್ಡಿನಲ್ಲಿ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಯುತ್ತಿರುವುದರಿಂದ ಗ್ರಾಹಕರು ವ್ಯಾಪಾರ ವಲಯದ ಒಳಗೆ ಬಾರದೆ ವ್ಯಾಪಾರ ನಡೆಸಿದ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುತ್ತಿದ್ದರೂ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿರುವುದು ಅಮಾನವೀಯ ಕ್ರಮವಾಗಿದೆ. ಹಾಗಾಗಿ ಇಂತಹ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಸಿಐಟಿಯು ಒತ್ತಾಯಿಸಿದೆ.
ನಗರದಲ್ಲಿ ಬಡ ಬೀದಿ ವ್ಯಾಪಾರಿಗಳ ಮೇಲೆ ದಾಳಿ ಮುಂದುವರಿದರೆ ಬೀದಿ ವ್ಯಾಪಾರಿಗಳನ್ನು ಸಂಘಟಿಸಿ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಕಾರ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.