Connect with us

LATEST NEWS

ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ವಿರುದ್ದ ಪಾಲಿಕೆ ಸದಸ್ಯರಿಂದ ಭ್ರಷ್ಟಾಚಾರ ಆರೋಪ

ಮಂಗಳೂರು ಜನವರಿ 04: ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ವಿರುದ್ದ ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಭಾರೀ ಭ್ರಷ್ಟಾಚಾರದ ಆರೋಪ ಮಾಡಿದ್ದು, ಆರೋಪ ಸುಳ್ಳಾಗಿದ್ದಲ್ಲಿ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಮಂಗಳೂರು ಮಹಾನಗರಪಾಲಿಕೆಯ ಸಾಮಾನ್ಯ ಸಭೆ ಇಂದು ನಡೆದಿದ್ದು, ಸಭೆಯಲ್ಲಿ ಪಾಲಿಕೆ ಆಯುಕ್ತರ ವಿರುದ್ದ ವಿಪಕ್ಷ ಸದಸ್ಯ ಗಂಭೀರವಾದ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಈ ವೇಳೆ ಇತರ ಸದಸ್ಯರು ಯಾವುದೇ ಅಡೆತಡೆ ಮಾಡದೇ ಮೌನವಾಗಿ ಕುಳಿತಿದ್ದು ಮಾತ್ರ ವಿಪರ್ಯಾಸವಾಗಿದೆ.


ಪಾಲಿಕೆಯ ಹಿರಿಯ ಸದಸ್ಯ ಅಬ್ದುಲ್‌ ರವೂಫ್‌ ದಾಖಲೆಗಳನ್ನು ತೋರಿಸಿ ನೇರವಾಗಿ ಆಯುಕ್ತರ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 20 ವರ್ಷಕ್ಕಿಂತಲೂ ಹಿಂದೆ ನಿರ್ಮಾಣವಾದ ಅನೇಕ ವಸತಿ, ಕಮರ್ಷಿಯಲ್‌ ಕಟ್ಟಡಗಳು ಕಾನೂನು ಪ್ರಕಾರ ನಿರ್ಮಾಣವಾಗಿಲ್ಲ ಅಂತ ಅವೆಲ್ಲದಕ್ಕೂ ಇಷ್ಟು ವರ್ಷ ಕಳೆದರೂ, ಹಲವು ಆಯುಕ್ತರು ಬಂದು ಹೋಗಿದ್ದರೂ ಕಂಪ್ಲೀಶನ್‌ ಸರ್ಟಿಫಿಕೆಟ್‌ ನೀಡಿರಲಿಲ್ಲ. ಆದರೆ ಈಗಿನ ಆಯುಕ್ತರು ಬಂದ ಬಳಿಕ ಅಂತಹ ಕಟ್ಟಡಗಳಿಗೆ ಕಂಪ್ಲೀಶನ್‌ ಸರ್ಟಿಫಿಕೆಟ್‌ ನೀಡಿದ್ದಾರೆ. ಯಾವ ಆಧಾರದ ಮೇಲೆ ನೀಡಿದ್ದು? ಇದು ಭ್ರಷ್ಟಾಚಾರ ಅಲ್ವಾ ಅಂತ ಅಬ್ದುಲ್‌ ರವೂಫ್‌ ಆರೋಪಿಸಿದರು.


ಇಬ್ಬರು ಎಇಇ, ಇಬ್ಬರು ಜೆಇ ಅಧಿಕಾರಿಗಳಿಗೆ 29 ದಿನ ಚಾರ್ಜ್‌ ನೀಡದೆ ಸತಾಯಿಸಿದ್ದಾರೆ, ಪಾಲಿಕೆಯಲ್ಲಿ 30 ವರ್ಷಗಳ ಅನುಭವ ಇರುವ ಜೆಇ, ಎಇಇಗಳನ್ನು ಬಿಟ್ಟು ಡೆಪ್ಯುಟೇಶನ್‌ ಮೇಲೆ ಬಂದವರಿಗೆ ಸೀನಿಯರ್‌ ಎಂಜಿನಿಯರ್‌ ಚಾರ್ಜ್‌ ನೀಡಿದ್ದಾರೆ. ಇದರಲ್ಲಿ ಯಾವ ಉದ್ದೇಶ ಇತ್ತು ಎಂದು ಪ್ರಶ್ನಿಸಿದರು.

ವಿವಿಧ ಕಾಮಗಾರಿಗಳಿಗೆ ಪಾಲಿಕೆಯಲ್ಲಿ ಕೇವಲ 60 ಕೋಟಿ ರು. ಹಣ ಇರುವುದು ಗೊತ್ತಿದ್ದೂ 160 ಕೋಟಿ ರು.ಗಳನ್ನು ಆಯುಕ್ತರು ಮಂಜೂರು ಮಾಡಿಸಿದ್ದಾರೆ. ತುರ್ತು ಕಾಮಗಾರಿಗಳಿಗೆ 5 ಲಕ್ಷ ರು.ವರೆಗೆ ರಿಯಾಯ್ತಿ ಇದೆ. ಆದರೆ ಆಯುಕ್ತರು ಸದಸ್ಯರನ್ನು ಕತ್ತಲೆಯಲ್ಲಿಟ್ಟು 1 ಲಕ್ಷ ರು.ಗಿಂತ ಹೆಚ್ಚಿನ ಕಾಮಗಾರಿಗಳಿಗೆ ಇ-ಟೆಂಡರ್‌ ಆದೇಶ ಮಾಡಿದ್ದಾರೆ ಎಂದರು. ಈ ಸಂದರ್ಭ ಆಯುಕ್ತರು ‘ದಾಖಲೆ ಇದ್ದರೆ ಕೊಡಿ, ಸುಮ್ಮನೆ ಆರೋಪ ಮಾಡಬೇಡಿ’ ಎಂದು ಕೇಳಿದ್ದಕ್ಕೆ ದಾಖಲೆಗಳ ಪ್ರತಿಗಳನ್ನು ಮೇಯರ್‌ಗೆ ಅಬ್ದುಲ್ ರವೂಫ್‌ ನೀಡಿದರು. ಆಯುಕ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಹಾದಿ ಬೀದಿಯಲ್ಲಿ ಕೂಡ ಜನರು ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಸರ್ಕಾರದ ತನಿಖೆಗೆ ಪತ್ರ ಬರೆಯುವಂತೆ ಮೇಯರ್‌ಗೆ ಒತ್ತಾಯಿಸಿದರು. ಬಳಿಕ ಆಯುಕ್ತರು ತಮ್ಮ ಆರೋಪಗಳಿಗೆ ಸ್ಪಷ್ಟನೆ ನೀಡಿದರು. ಅದಕ್ಕೆ ರವೂಫ್‌ ಆಕ್ಷೇಪ ಎತ್ತಿದರು. ಕೊನೆಗೆ, ಆಯುಕ್ತರ ಬಗ್ಗೆ ಇಂಥ ಆರೋಪ ಬಂದಿರುವ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮೇಯರ್‌ ಮನೋಜ್‌ ಕೋಡಿಕಲ್‌ ರೂಲಿಂಗ್‌ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *