Connect with us

LATEST NEWS

ಫೆಬ್ರವರಿ 17 ರಿಂದ ಮತ್ಸ್ಯಗಂಧ ರೈಲಿಗೆ ಜರ್ಮನ್ ತಂತ್ರಜ್ಞಾನದ ನೂತನ ಎಲ್‌ಹೆಚ್‌ಬಿ ಕೋಚ್ – ಸಂಸದ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು ಫೆಬ್ರವರಿ 08: ಕೊನೆಗೂ ಮಂಗಳೂರು ಮತ್ತು ಮುಂಬೈ ನ ಜೀವನಾಡಿ ಮತ್ಯಗಂಧ ರೈಲಿಗೆ ಹೊಸ ಕೋಚ್ ಸಿಗಲಿದೆ. 25ಕ್ಕೂ ಹೆಚ್ಚು ವರ್ಷಗಳಿಂದಲೂ ಹಳೆಯ ರೈಲ್ವೆ ಬೋಗಿಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಇನ್ನು ಮುಂದೆ ಜರ್ಮನ್ ತಂತ್ರಜ್ಞಾನದ ಎಲ್‌ಹೆಚ್‌ಬಿ ಕೋಚ್ ಸಿಗಲಿದೆ. ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಹಿತಿ ನೀಡಿದ್ದಾರೆ.


ಕರಾವಳಿ ಕರ್ನಾಟಕ ಹಾಗೂ ಮುಂಬೈ ನಡುವಿನ “ಮತ್ಸ್ಯಗಂಧ ಎಕ್ಸ್‌ಪ್ರೆಸ್” ರೈಲು ಈ ಭಾಗದ ರೈಲ್ವೆ ಪ್ರಯಾಣಿಕರಲ್ಲಿ ಭಾವನಾತ್ಮಕ ಸಂಬಂಧವನ್ನು ಹೊಂದಿವೆ. ಅತಿಹೆಚ್ಚು ಪ್ರಯಾಣಿಕರನ್ನು ಒಯ್ಯುವ ಈ ರೈಲು ಭಾಗಶಃ ಶಿಥಿಲಾವಸ್ಥೆಗೆ ಬಂದಿದ್ದು ಅನೇಕ ಪ್ರಯಾಣಿಕರು ಈ ಬಗ್ಗೆ ನನ್ನಲ್ಲಿ ಮನವಿ ಮಾಡಿದ್ದರು. ಅನೇಕರು ವೀಡಿಯೋ ಮೂಲಕ ವ್ಯವಸ್ಥೆಯನ್ನು ಸರಿಪಡಿಸುವ ಸಲಹೆ ನೀಡಿದ್ದರು. ಈ ಎಲ್ಲಾ ಸಲಹೆ ಹಾಗೂ ಮನವಿಯನ್ನು ಪುರಸ್ಕರಿಸಿ ನಾನು ಗೌರವಾನ್ವಿತ ಕೇಂದ್ರ ರೈಲ್ವೆ ಇಲಾಖೆಯ ಸಚಿವರುಗಳಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಶ್ರೀ ವಿ.ಸೋಮಣ್ಣ ರವರ ಗಮನಕ್ಕೆ ತಂದಿದ್ದು; ಸಂಪೂರ್ಣ ವರದಿಯನ್ನು ಅವರ ಮುಂದಿಟ್ಟಿದ್ದೆ. ನನ್ನ ಮನವಿಯನ್ನು ತಕ್ಷಣ ಪುರಸ್ಕರಿಸಿದ ಗೌರವಾನ್ವಿತ ಸಚಿವರುಗಳು ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನ ಸಂಪೂರ್ಣ ಕೋಚ್‌ಗಳನ್ನು ಬದಲಾಯಿಸಿ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಹೆಚ್‌ಬಿ ಕೋಚ್ ಅಳವಡಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಇದೀಗ ನೂತನ ಕೋಚ್‌ಗಳು ಸಿದ್ಧವಾಗಿದ್ದು ಇದೇ ಬರುವ ಫೆಬ್ರವರಿ 17 ರಂದು ಮೊದಲ ಪ್ರಯಾಣವನ್ನು ಬೆಳೆಸಲಿದೆ.


ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಶುಭ ಘಳಿಗೆಯಲ್ಲಿ ಅಂದಿನ ಕೇಂದ್ರ ಸಚಿವರಾದ ಸ್ಮರಣೀಯ ದಿ.ಜಾರ್ಜ್ ಫರ್ನಾಂಡೀಸ್ ರವರ ವಿಶೇಷ ಪರಿಶ್ರಮದಿಂದ ಅಂದಿನ ಜನಮೆಚ್ಚಿದ ಪ್ರಧಾನಮಂತ್ರಿ ಸ್ಮರಣೀಯ ದಿ.ಅಟಲ್ ಬಿಹಾರಿ ವಾಜಪೇಯಿ ರವರ ಕಾಳಜಿಯ ಮೇರೆಗೆ ಮೇ 01-1998ರ ಸಂದರ್ಭದಲ್ಲಿ ಈ ರೈಲು ಉದ್ಘಾಟನೆಗೊಂಡಿತು. ಅಲ್ಲಿಂದ ಇಂದಿನವರೆಗೂ ಸುಧೀರ್ಘ ಕಾಲ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿ ಜನರನ್ನು ಭಾವನಾತ್ಮಕವಾಗಿ ಈ ರೈಲು ಬೆಸೆದಿದೆ. ಈಗ ಆಧುನಿಕ ಭಾರತದ ದ್ಯೋತಕವಾಗಿ ಈ ರೈಲು ಹೊಸ ತಂತ್ರಜ್ಞಾನದ ಮೂಲಕ ಕಂಗೊಳಿಸಲಿದ್ದು ಪ್ರಯಾಣಿಕರಿಗೆ ವಿಶೇಷ ಸೇವೆಯನ್ನು ನೀಡಲಿದೆ.
ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಪಘಾತವಾದರೂ ಜನರು ಸುರಕ್ಷಿತವಾಗಿರುತ್ತಾರೆ. ಯಾವುದೇ ಅಪಘಾತ ಸಂಭವಿಸಿದರೂ ಕೋಚ್‌ಗಳು ಪಲ್ಟಿ ಆಗದೆ ZIGZAG ರೀತಿಯಲ್ಲಿ ವರ್ಗೀಕರಿಸಿ ನಿಂತುಬಿಡುತ್ತದೆ. ಈ ಹೊಸ ಕೋಚ್‌ನ ರೈಲಲ್ಲಿ ಶಬ್ದದ ಸಮಸ್ಯೆ ಕಡಿಮೆಯಾಗುತ್ತದೆ. ರೈಲು ಓಡಾಟದ ಸಂದರ್ಭದಲ್ಲಿ ಹಿಂದಿಗಿಂತ ಶಬ್ದವನ್ನು ಕಡಿಮೆಗೊಳಿಸುತ್ತದೆ. ಶೌಚಾಲಯ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಗಿದ್ದು ಆಧುನಿಕ ಶೈಲಿಯನ್ನು ಅಳವಡಿಸಲಾಗಿದೆ.

ಫೆಬ್ರವರಿ 17ರಂದು ಈ ಹೊಸ ಕೋಚ್‌ಗಳುಳ್ಳ ರೈಲಿನ ಪ್ರಥಮ ಪ್ರಯಾಣ ನಡೆಸಲಿದ್ದು ಉಡುಪಿಗೆ ಆಗಮಿಸುವ ಸಂದರ್ಭದಲ್ಲಿ ತಮ್ಮೆಲ್ಲರನ್ನು ನಾನು ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇನೆ. ಈ ರೈಲನ್ನು ಸ್ವಾಗತಿಸುವ ಸಂದರ್ಭದಲ್ಲಿ ಮುಂದಿನ ರೈಲ್ವೆ ಯೋಜನೆಗಳ ಕುರಿತು ಒಂದಷ್ಟು ಚರ್ಚೆಗಳು ನಡೆಯಲಿದ್ದು ಅಂದು ರೈಲ್ವೆ ಅಧಿಕಾರಿಗಳು ನಮ್ಮ ಜೊತೆಗೆ ಇರಲು ತಿಳಿಸಿದ್ದೇನೆ. ರೈಲ್ವೆ ಪ್ರಯಾಣಿಕರು ಯಾವುದೇ ಕುಂದು ಕೊರತೆಗಳನ್ನು ರೈಲು ಪ್ರಯಾಣಿಸುವ ಮೂಲಕ ಚರ್ಚಿಸಲಿದ್ದೇನೆ.

ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನ ಬೆನ್ನಲ್ಲೇ ಮಹಾರಾಷ್ಟ್ರಕ್ಕೆ ತೆರಳುವ ಮಂಗಳೂರು ಎಕ್ಸ್‌ಪ್ರೆಸ್‌ ರೈಲು ಮಾರ್ಚ್1 ರಿಂದ ನೂತನ ಎಲ್‌ಹೆಚ್‌ಬಿ ಕೋಚ್‌ಗಳನ್ನೊಳಗೊಂಡು ಪ್ರಯಾಣ ಬೆಳೆಸಲಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ವೇಗ ಕೊಟ್ಟು ಸಹಕರಿಸಿದ ದೇಶದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ ಹಾಗೂ ವಿಶೇಷವಾಗಿ ನನ್ನೆಲ್ಲಾ ರೈಲ್ವೆ ಮನವಿಗಳಿಗೆ ಬೆಂಬಲ ನೀಡಿ ಸಹಕರಿಸುವ ಗೌರವಾನ್ವಿತ ಸಚಿವರಾದ ವಿ.ಸೋಮಣ್ಣರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದರ ಜೊತೆಗೆ ಕಾಲಕಾಲಕ್ಕೆ ರೈಲ್ವೆ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಅಮೂಲ್ಯ ಸಲಹೆಗಳನ್ನು ನೀಡುತ್ತಿರುವ ರೈಲ್ವೆ ಬಳಕೆದಾರರ ಸಮಿತಿಯ ಪ್ರಮುಖರಿಗೂ ವಿಶೇಷ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *