LATEST NEWS
ಮಣಿಪುರ ಹಿಂಸಾಚಾರ – ಕಂಡಲ್ಲಿ ಗುಂಡು ಹಾರಿಸಲು ಮಣಿಪುರ ಸರಕಾರ ಆದೇಶ
ಮಣಿಪುರ ಮೇ 05: ಮಣಿಪುರದಲ್ಲಿ ಕುಕಿ ಬುಡಕಟ್ಟು ಜನಾಂಗ ಮತ್ತು ಬಹುಸಂಖ್ಯಾತ ಮೈತಿ ಸಮುದಾಯದ ನಡುವಿನ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿ ಕೈಮೀರಿದರೆ, ಕಂಡಲ್ಲಿ ಗುಂಡು ಹಾರಿಸುವಂತೆ ಮಣಿಪುರ ಸರ್ಕಾರ ಆದೇಶಿಸಿದೆ.
1973ರ CRPC ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಆದೇಶಕ್ಕೆ ರಾಜ್ಯಪಾಲರು ಸಹಿ ಮಾಡಿದ್ದಾರೆ. ಎಲ್ಲಾ ರೀತಿಯ ಮನವೊಲಿಕೆ ಹಾಗೂ ಎಚ್ಚರಿಕೆ ನಡುವೆಯೂ ಬಗ್ಗದೇ ಹೋದರೆ, ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸುವಂತೆ ಮಣಿಪುರ ಗೃಹ ಇಲಾಖೆ ಸೂಚನೆ ನೀಡಿದೆ. ಆದೇಶಗಳನ್ನು ಹೊರಡಿಸಲು ರಾಜ್ಯದ ಮಾಜಿಸ್ಟ್ರೇಟರ್‌ಗಳಿಗೆ ಅಧಿಕಾರ ನೀಡಲಾಗಿದೆ.
ಗಲಭೆ ನಿಯಂತ್ರಣಕ್ಕೆ ರ್ಯಾಪಿಡ್ ಆಕ್ಷನ್ ಫೋರ್ಸ್ ನ 500 ಸಿಬ್ಬಂದಿಯನ್ನು ಇಂಫಾಲ್ ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಹಿಂಸಾಚಾರದಿಂದ ಈ ವರೆಗೂ 10 ಮಂದಿ ಸಾವನ್ನಪ್ಪಿದ್ದು, ಹಿಂಸಾಚಾರ ಪೀಡಿತ ಪ್ರದೇಶಗಳಿಂದ ಈ ವರೆಗೂ ಸುಮಾರು 9,000 ಜನರನ್ನು ಸ್ಥಳಾಂತರಿಸಲಾಗಿದೆ.