LATEST NEWS
ಮಾದಕ ವಸ್ತು ಪೂರೈಕೆ ಜಾಲದ ವಿರುದ್ದ ಕ್ರಮ ಕೈಗೊಳ್ಳುವ ಪೊಲೀಸರಿಗೆ ವರ್ಗಾವಣೆ ಶಿಕ್ಷೆ ದುರದೃಷ್ಟಕರ – ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ
ಮಾದಕ ವಸ್ತು ಪೂರೈಕೆ ಜಾಲದ ವಿರುದ್ದ ಕ್ರಮ ಕೈಗೊಳ್ಳುವ ಪೊಲೀಸರಿಗೆ ವರ್ಗಾವಣೆ ಶಿಕ್ಷೆ ದುರದೃಷ್ಟಕರ – ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ
ಮಂಗಳೂರು ಸೆಪ್ಟೆಂಬರ್ 24: ಮಂಗಳೂರಿನಲ್ಲಿ ಗಾಂಜಾ, ಮಾದಕ ವಸ್ತುಗಳ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದ್ದು , ನಗರದಲ್ಲಿರುವ ಪಬ್ ಗಳಲ್ಲೇ ಅವ್ಯಾಹತವಾಗಿ ಮಾದಕವಸ್ತು ಪೂರೈಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದ್ದಾರೆ.
ಈ ಮೂಲಕ ಜಿಲ್ಲೆಯ ಪೊಲೀಸ್ ಇಲಾಖೆ ಮಾದಕವಸ್ತು, ಗಾಂಜಾ ಪೂರೈಕೆ ಜಾಲದ ವಿರುದ್ದ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ಮಾದಕ ವಸ್ತುಗಳ ಮೂಲ ಹುಡುಕುವ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆಯಾಗುತ್ತಿದೆ ಎಂದು ಹೇಳಿದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಮಾದಕವಸ್ತು ಪೂರೈಕೆ ಜಾಲದ ಮೂಲಕ್ಕೆ ಕೈ ಹಾಕುವ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡುತ್ತಿರುವುದು ದುರದೃಷ್ಟಕರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ನಗರದ ಕೆನರಾ ಕಾಲೇಜಿನಲ್ಲಿ ನಡೆದ ‘ಶಾಲಾ, ಕಾಲೇಜುಗಳಲ್ಲಿ ಕೋಮು ಸೌಹಾರ್ದತೆ ಜಾಗೃತಿ ಹಾಗೂ ಮಾದಕದ್ರವ್ಯ, ಸೈಬರ್ ಕ್ರೈಂ ವಿರುದ್ಧದ ಅಭಿಯಾನ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ನಗರದಲ್ಲಿ ಪಬ್‌ಗಳಲ್ಲಿ ಎಳೆಯ ಮಕ್ಕಳಿಗೆ ಅರಿವಿಲ್ಲದಂತೆಯೇ ಮಾದಕವಸ್ತು ಪೂರೈಸಲಾಗುತ್ತಿದೆ. ಮಕ್ಕಳು ಮಾದಕವಸ್ತುವಿನ ದಾಸರಾಗಿ ಕಾಯಂ ತಮ್ಮ ಗ್ರಾಹಕರಾಗಿ ಇರಬೇಕು ಎಂಬ ದುರಾಸೆಯಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಹೇಳಿದರು.
ದಕ್ಷಿಣಕನ್ನಡ ಜಿಲ್ಲೆಯ ಜನರಲ್ಲಿ ಹೆಚ್ಚಿನವರಿಗೆ ಉತ್ತಮ ಆದಾಯದ ಮೂಲಗಳಿವೆ. ಹಣದ ಲಭ್ಯತೆ, ಜೀವನ ಶೈಲಿ, ಸಂಸ್ಕೃತಿಯ ಹೆಸರಿನಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೂ ಪಬ್‌ಗಳಿಗೆ ಹೋಗಲು ಪೋಷಕರು ಅವಕಾಶ ನೀಡುತ್ತಿದ್ದಾರೆ. ಅಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವು ಅವರಿಗೆ ಇದ್ದಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನ್ಯಾಯಾಧೀಶರು ಇತ್ತೀಚೆಗೆ ನಡೆದ ಒಂದು ಘಟನೆ ಸಹಿತ ಮಾದಕ ವಸ್ತುಗಳು ಜಿಲ್ಲೆಯಲ್ಲಿ ಹೇಗೆ ಬೇರೂರಿದೆ ಎನ್ನುವುದನ್ನು ವಿವರಿಸಿದರು. ‘ಕಳೆದ ವಾರ ಒಂದು ದಿನ ರಾತ್ರಿ 11.30ಕ್ಕೆ ಏಳು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮಾದಕವಸ್ತು ಸೇವನೆ ಪ್ರಕರಣದಲ್ಲಿ ಪೊಲೀಸರು ನನ್ನ ಎದುರು ಹಾಜರುಪಡಿಸಿದರು. ಅರ್ಧ ಗಂಟೆ ಕಾಲ ಅವರೊಂದಿಗೆ ಮಾತನಾಡಿದೆ. ಈ ಜಾಲದ ಕುರಿತು ಅವರು ನೀಡಿದ ಮಾಹಿತಿಗಳು ದಿಗ್ಭ್ರಮೆ ಹುಟ್ಟಿಸಿದವು’ ಎಂದರು.
ಮೂಲ ಹುಡುಕಿದರೆ ವರ್ಗಾವಣೆ ಶಿಕ್ಷೆ ‘ಜಿಲ್ಲೆಯಲ್ಲಿ ಮಾದಕವಸ್ತು ಪೂರೈಕೆ ಜಾಲ ದೊಡ್ಡದಾಗಿ ಬೆಳೆಯುತ್ತಿದೆ. ಯುವಕರನ್ನು ನಾಶ ಮಾಡಿದರೆ ದೇಶವನ್ನೂ ನಾಶ ಮಾಡಬಹುದು ಎಂಬ ಗುರಿ ಇಟ್ಟುಕೊಂಡು ಈ ಜಾಲ ಕೆಲಸ ಮಾಡುತ್ತಿದೆ. ಮಾದಕವಸ್ತು ಪೂರೈಕೆ ಜಾಲದ ಮೂಲಕ್ಕೆ ಕೈ ಹಾಕುವ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡುತ್ತಿರುವುದು ದುರದೃಷ್ಟಕರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.