KARNATAKA
ಮಂಗಳೂರು : ಉಳಿಯ ದ್ವೀಪದಲ್ಲಿನ ಅಕ್ರಮ ಮರಳುಗಾರಿಕೆ ವಿರುದ್ದ ಧ್ವನಿ ಎತ್ತಿದ ಕೆಥೋಲಿಕ್ ಸಭಾ ಅಧ್ಯಕ್ಷರ ಮೇಲೆ ಮರಳು ಮಾಫಿಯಾ ತಂಡದ ದಾಳಿ..!
ಮಂಗಳೂರು : ಉಳ್ಳಾಲ ಪಾವೂರು ಉಳಿಯ ದ್ವೀಪದಲ್ಲಿನ ಅಕ್ರಮ ಮರಳುಗಾರಿಕೆ ವಿರುದ್ದ ಧ್ವನಿ ಎತ್ತಿ ಪ್ರತಿಭಟನೆ ನಡೆಸಿದ್ದ ಕೆಥೋಲಿಕ್ ಸಭಾ ಅಧ್ಯಕ್ಷರ ಮೇಲೆ ಮರಳು ಮಾಫಿಯಾದ ತಂಡದಿಂದ ಶನಿವಾರ ಸಂಜೆ ಹಲ್ಲೆ ನಡೆದಿದೆ.
ಹಲ್ಲೆಗೊಳಗಾದ ಆಲ್ವಿನ್ ಡಿಸೋಜಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತಿತರರು ಆಸ್ಪತ್ರೆಗೆ ತೆರಳಿ ಆಲ್ವಿನ್ ಡಿಸೋಜರ ಆರೋಗ್ಯ ವಿಚಾರಿಸಿದ್ದಾರೆ. ಸುಮಾರು 12 ರಿಂದ 15 ಜನರ ತಂಡ ಈ ಹಲ್ಲೆ ನಡೆಸಿದ್ದು ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಧಾನ ಸಭಾ ಅಧ್ಯಕ್ಷ ಯು ಟಿ. ಖಾದರ್ ಅವರ ಕೇತ್ರವಾದ ಪಾವೂರು ಉಳಿಯ ದ್ವೀಪವಾಸಿಗಳ ಬದುಕನ್ನೆ ಕಸಿದ ಉಳ್ಳಾಲ ಪಾವೂರು ಉಳಿಯ ದ್ವೀಪದಲ್ಲಿನ ಅಕ್ರಮ ಮರಳುಗಾರಿಕೆ ವಿರುದ್ದ ನಡೆದ ಪ್ರತಿಭಟನೆಯ ನೇತೃತ್ವವನ್ನು ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಘಟಕ ವಹಿಸಿತ್ತು. ಕಳೆದ ಶುಕ್ರವಾರ ಇಲ್ಲಿನ ಅಕ್ರಮ ಮರಳುಗಾರಿಕೆಯ ವಿರುದ್ದ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನಾ ಸಭೆ ಮಂಗಳೂರಿನಲ್ಲಿ ನಡೆಸಲಾಗಿತ್ತು. ಪಾವೂರು ಉಳಿಯ ದ್ವೀಪ ನಿವಾಸಿಗಳಿಗೆ ಮರಳು ದಂಧೆ ನಡೆಸುವವರಿಂದ ಜೀವನವೇ ದುಸ್ತರ ವಾಗಿದೆ. ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಾವೂರು ಉಳಿಯ, ರಾಣಿಪುರ, ಉಳ್ಳಾಲ ಹೊಯಿಗೆ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿದ್ದು, ರಾಣಿಪುರ ಉಳಿಯದಲ್ಲಿ ಮನೆಗಳು ಅಪಾಯದಲ್ಲಿವೆ ಎಂದು ಆರೋಪಿಸಿದ್ದರು. ಇದೀಗ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆಥೋಲಿಕ್ ಸಭಾ ಅಧ್ಯಕ್ಷರ ಮೇಲೆಯೇ ಮರಳು ಮಾಫಿಯಾ ತಂಡ ಹಲ್ಲೆ ನಡೆಸಿದೆ.
ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ್ದ ಆಲ್ವಿನ್ ಡಿಸೋಜಗೆ ಹಲ್ಲೆ ಪ್ರಕರಣ, ಕಠಿಣ ಕ್ರಮಕ್ಕೆ ಸ್ಪೀಕರ್ ಖಾದರ್ ಸೂಚನೆ
ಹಲ್ಲೆ ಕೃತ್ಯವನ್ನು ಖಂಡಿಸಿರುವ ಸ್ಪೀಕರ್ ಯು.ಟಿ.ಖಾದರ್ ಪೊಲೀಸರು ತಕ್ಷಣ ಹಲ್ಲೆಗೈದ ಅಕ್ರಮ ಮರಳು ದಂಧೆಕೋರರನ್ನು ಬಂಧಿಸಬೇಕು ಮತ್ತವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.