LATEST NEWS
ತಪಾಸಣೆಗೆ ಇಳಿದ ಪೊಲೀಸರನ್ನೆ ಕಿಡ್ನಾಪ್ ಮಾಡಿ ಮಂಗಳೂರು ಬಂದರಿನಲ್ಲಿ ಇಳಿಸಿದ ತಂಡ

ಮಂಗಳೂರು ಡಿಸೆಂಬರ್ 22: ಮೀನುಗಾರಿಕಾ ಬೋಟ್ ಗಳ ತಪಾಸಣೆಗೆ ಇಳಿದ ಇಬ್ಬರು ಪೊಲೀಸರನ್ನೆ ತಂಡವೊಂದು ಅಪಹರಿಸಿರುವ ಘಟನೆ ನಿನ್ನೆ ನಡೆದಿದೆ.

ಸಾಂಧರ್ಭಿಕ ಚಿತ್ರ
ಕುಂಬಳೆ ಶಿರಿಯದಲ್ಲಿರುವ ಕರಾವಳಿ ಪೊಲೀಸ್ ಠಾಣೆಯ ಸಬ್ಇನ್ಸ್‌ಪೆಕ್ಟರ್ ಕೆ.ವಿ ರಾಜೀವ್ ಕುಮಾರ್ ನೇತೃತ್ವದ ತಂಡವು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಂಜೇಶ್ವರ ಸಮುದ್ರದಲ್ಲಿ ಕರ್ನಾಟಕ ನೋಂದಾವಣೆಯ ಬೋಟ್‌ನ ದಾಖಲೆಗಳನ್ನು ತಪಾಸಣೆ ನಡೆಸಿದ್ದು, ಕೆಲ ಸಂಶಯ ಉಂಟಾದ ಹಿನ್ನಲೆಯಲ್ಲಿ ಪೊಲೀಸರು ಬೋಟ್‌ನ್ನು ವಶಕ್ಕೆ ಪಡೆದುಕೊಂಡಿದ್ದರು.

ಬಳಿಕ ಬೋಟ್ ಅನ್ನು ಮಂಜೇಶ್ವರ ಬಂದರಿಗೆ ಒಯ್ಯುವಂತೆ ಸೂಚನೆ ನೀಡಲಾಗಿತ್ತು. ಈ ಬೋಟ್‌ಗೆ ರಘು ಮತ್ತು ಸುದೀಶ್ ಎಂಬ ಪೊಲೀಸರನ್ನು ಹತ್ತಿಸಲಾಗಿತ್ತು. ಸಬ್ ಇನ್‌ಸ್ಪೆಕ್ಟರ್ ಕೆ.ವಿ. ರಾಜೀವ್ ಕುಮಾರ್ ಹಾಗೂ ಇತರ ಪೊಲೀಸರು, ಮಂಜೇಶ್ವರ ಬಂದರಿಗೆ ತಲುಪಿ ಗಂಟೆಗಳಾದರೂ ವಶಕ್ಕೆ ಪಡೆದ ಬೋಟ್ ತಲುಪಿರಲಿಲ್ಲ. ಬೋಟ್‌ನಲ್ಲಿದ್ದ ಪೊಲೀಸರನ್ನು ಸಂಪರ್ಕಿಸಿದಾಗ ಬೋಟ್ ವೇಗವಾಗಿ ಇನ್ನೊಂದು ಕಡೆಗೆ ತೆರಳುತ್ತಿರುವ ಮಾಹಿತಿ ದೊರೆತಿತ್ತು. ಕೂಡಲೇ ಕಾಸರಗೋಡಿನ ಹಿರಿಯ ಪೊಲೀಸ್ ಅಧಿಕಾರಿಗಳು, ಮಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಬೋಟ್ ಮಂಗಳೂರು ಬಂದರು ತಲುಪಿದ್ದು, ಇಬ್ಬರು ಪೊಲೀಸರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಬೋಟ್‌ನಲ್ಲಿ 12 ಮಂದಿ ಇದ್ದು, ಅಗತ್ಯ ದಾಖಲೆ ಇಲ್ಲದಿರುವುದರಿಂದ ವಶಕ್ಕೆ ಪಡೆಯಲಾಗಿತ್ತು ಎಂದು ಕರಾವಳಿ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.