LATEST NEWS
ಉತ್ತರ ಭಾರತದ ಸೈಬರ್ ವಂಚಕರಿಗೆ ಸಹಾಯ ಮಾಡಿ ಸಿಕ್ಕಿಹಾಕಿಕೊಳ್ಳುತ್ತಿರುವ ಕೇರಳದ ಯುವಕರು
ಮಂಗಳೂರು, ಜನವರಿ 16: ಉತ್ತರ ಭಾರತದ ಸೈಬರ್ ವಂಚಕರಿಗೆ ಸಹಾಯ ಮಾಡಲು ಹೋಗಿ ಕೇರಳದ ಇಬ್ಬರು ಯುವಕರು ಇದೀಗ ಪೊಲೀಸ್ ಅತಿಥಿಯಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಲಾಭದ ಆಸೆ ತೋರಿಸಿ ವ್ಯಕ್ತಿಯೊಬ್ಬರಿದಂ ಬರೋಬ್ಬರಿ 77 ಲಕ್ಷ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ಇದೀಗ ಕೇರಳದ ಇಬ್ಬರು ಯುವಕರು ಅರೆಸ್ಟ್ ಆಗಿದ್ದಾರೆ. ಬಂಧಿತರನ್ನು ಕೇರಳ ಕಣ್ಣೂರಿನ ಪತಾಯಕುನ್ನು ಉಮ್ಮರ್ ವಲಿಯ ಪರಂಬತ್ (41) ರಿಯಾಝ್ ಎಂ.ವಿ. (45) ಎಂದು ಗುರುತಿಸಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂಬ ವಾಟ್ಸ್‌ಆ್ಯಪ್ ಸಂದೇಶವನ್ನು ಗಮನಿಸಿದ ವ್ಯಕ್ತಿಯು ಹಂತ ಹಂತವಾಗಿ 77,96,322.08 ರೂ.ವನ್ನು ಪಾವತಿಸಿದ್ದರು. ಆದರೆ ಆರೋಪಿಗಳು ಲಾಭಾಂಶ ನೀಡದೆ ವಂಚಿಸಿದ್ದರು. ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿಯು ಸೆನ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಹಣ ವರ್ಗಾವಣೆ ಆದ ಬ್ಯಾಂಕ್ ಖಾತೆ ಪರಿಶೀಲನೆ ವೇಳೆ ಈ ಇಬ್ಬರು ಯುವಕರು ಸಿಕ್ಕಿಹಾಕಿಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಗೆ 26,27,114 ಹಣ ವರ್ಗಾವಣೆಯಾಗಿತ್ತು. ಬಳಿಕ ಈ ಖಾತೆಯಿಂದ ಉಮರ್ ವಲಿಯ ಪರಂಬತ್ ಎಂಬಾತನ ಬ್ಯಾಂಕ್ ಖಾತೆಗೆ 6 ಲಕ್ಷ ರೂ. ಪಾವತಿಯಾದುದು ಕಂಡು ಬಂತು. ತನಿಖೆ ಕೈಗೊಂಡಾಗ ರಿಯಾಝ್ ಎಂ.ವಿ. ಎಂಬಾತನು ಹಣವನ್ನು ವರ್ಗಾವಣೆ ಮಾಡಿಸಿದ್ದ. ಹೀಗೆ ಈ ಪ್ರಕರಣದಲ್ಲಿ ಭಾಗಿಯಾದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.