DAKSHINA KANNADA
ಮಂಗಳೂರಿನ ರಿಷಿಕಾ ಕುಂದೇಶ್ವರ, ಕುಣಿಗಲ್‌ನ ವಿಷ್ಣುಗೆ ಜೀ ಕನ್ನಡ Drama Juniors ವಿನ್ನರ್ ಪಟ್ಟ..!

ಮಂಗಳೂರು : ಜೀ ಕನ್ನಡ ವಾಹಿನಿಯ Drama Juniors Season 5 ನಲ್ಲಿ ಮಂಗಳೂರಿನ ರಿಷಿಕಾ ಕುಂದೇಶ್ವರ, ಕುಣಿಗಲ್‌ನ ವಿಷ್ಣುDrama Juniors ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಭಾನುವಾರ ಸೀಸನ್ 5ರ ವಿಜೇತರು ಯಾರು ಎಂಬುದನ್ನು ಘೋಷಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಕಂಡಿದೆ. ಈ ಸಲ ವಿಶೆಷವಾಗಿ ಇಬ್ಬರು ವಿಜೇತರಾಗಿದ್ದಾರೆ. ರಾಜ್ಯದ 31 ಜಿಲ್ಲೆಗಳಿಂದ ಹತ್ತಾರು ಬಾಲ ಪ್ರತಿಭೆಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಲಾಗಿತ್ತು. ಮೊದಲ ವಾರದಿಂದಲೇ ಶುರುವಾದ ಮಕ್ಕಳ ಆಟ, ಫಿನಾಲೆ ಹಂತಕ್ಕೆ ಬರುವವರೆಗೂ ಬರೋಬ್ಬರಿ 200ಕ್ಕೂ ಅಧಿಕ ಸ್ಕಿಟ್‌ಗಳನ್ನು ಮಾಡಿ ಮುಗಿಸಿದ್ದರು ಈ ಪುಟಾಣಿಗಳು. ಪೌರಾಣಿಕ, ಸಾಮಾಜಿಕ, ಹಾಸ್ಯ ಪ್ರಧಾನ ಎಲ್ಲ ಬಗೆಯ ಶೋಗಳಿಂದಲೇ ಈ ಸಲದ ವೇದಿಕೆಯನ್ನು ರಂಗಾಗಿಸಿದ್ದರು. 21 ವಾರ ಕರುನಾಡನ್ನು ಮನರಂಜಿಸಿದ 14 ಮಕ್ಕಳ ಪೈಕಿ ಯಾರು ವಿಜೇತರು ಎಂಬ ಕೌತುಕಕ್ಕೆ ಭಾನುವಾರ ತೆರೆಬಿದ್ದಿದೆ. ಈ ಬಾರಿ ಎಲ್ಲ14 ಮಂದಿ ಪುಟಾಣಿಗಳು ಫಿನಾಲೆ ಸುತ್ತಿನಲ್ಲಿದ್ದರು. ಆ ಪೈಕಿ ಫಿನಾಲೆ ರೌಂಡ್‌ನಲ್ಲಿ ಭದ್ರಾವತಿಯ ಇಂಚರ, ಶಿವಮೊಗ್ಗದ ಮಹಾಲಕ್ಷ್ಮೀ, ಮಂಗಳೂರಿನ ರಿಶಿಕಾ, ಕುಣಿಗಲ್‌ನ ವಿಷ್ಣು ಆಯ್ಕೆಯಾದರು. ಈ ನಾಲ್ವರಲ್ಲಿ ಇಂಚರ ಎರಡನೇ ರನ್ನರ್ ಅಪ್ ಆದರು. ಅದಾದ ಬಳಿಕ ರಿಷಿಕಾ ಕುಂದೇಶ್ವರ ಮತ್ತು ವಿಷ್ಣು ಅವರನ್ನು ಡ್ರಾಮಾ ಜೂನಿಯರ್ಸ್ ಸೀಸನ್ 5ರ ಜಂಟಿ ವಿಜೇತರು ಎಂದು ರವಿಚಂದ್ರನ್ ಘೋಷಿಸಿದರು.

ಇತ್ತ ಶಿವಮೊಗ್ಗದ ಮಹಾಲಕ್ಷ್ಮೀ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು. ಇದಷ್ಟೇ ಅಲ್ಲದೆ, ಡ್ರಾಮಾ ಜೂನಿಯರ್ಸ್ ಸೀಸನ್ 5ರ ಎಂಟರ್‌ಟ್ರೇನರ್ ಆಗಿ ಆಲ್‌ರೌಂಡರ್ ಆರ್ಯ ಸ್ವರೂಪ್ ಹೊರಹೊಮ್ಮಿದರು.ವಿಜೇತರಿಗೆ 30*40 ಸೈಟ್ ಬಹುಮಾನವಾಗಿ ಬಂದರೆ, ಮೊದಲ ರನ್ನರ್ ಅಪ್ ಸ್ಥಾನ ಪಡೆದ ಮಹಾಲಕ್ಷ್ಮೀಗೆ 3 ಲಕ್ಷ ನಗದು ಬಹುಮಾನ, ಎರಡನೇ ರನ್ನರ್ ಅಪ್ ಆದ ಇಂಚರಾಗೆ 1 ಲಕ್ಷ ಬಹುಮಾನ ನೀಡಲಾಗಿದೆ. ಇನ್ನು ಕಲರ್‌ಫುಲ್ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಹಿರಿಯ ನಟಿ ಲಕ್ಷ್ಮೀ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಎಂದಿನಂತೆ ತೀರ್ಪುಗಾರರಾಗಿ ವೇದಿಕೆ ಮೇಲಿದ್ದರು. ಅರುಣ್ ಸಾಗರ್ ಮತ್ತು ರಾಜು ತಾಳಿಕೋಟೆ ಸಹ ಮಕ್ಕಳನ್ನು ತಿದ್ದಿ ತೀಡಿ ಹುರಿದುಂಬಿಸಿದ್ದರು. ಕಳೆದ 21 ವಾರಗಳಿಂದ ಜೀ ಕನ್ನಡದಲ್ಲಿ ಡ್ರಾಮಾ ಜೂನಿಯರ್ಸ್ ಸೀಸನ್ 5 ಪ್ರಸಾರ ಕಾಣುತ್ತ ಬಂದಿದ್ದು ಈ ಅವಧಿಯಲ್ಲಿ ಸಾಕಷ್ಟು ಪುಟಾಣಿಗಳು ತಮ್ಮ ಪ್ರತಿಭೆ ಮೂಲಕವೇ ನಾಡಿನ ಮನೆ ಮಾತಾಗಿದ್ದಾರೆ. ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಇದೇ ಶೋಗೆ ವೈಭವದ ತೆರೆ ಬಿದ್ದಿದೆ.
Pingback: ಜೀ ಕನ್ನಡ ಡ್ರಾಮಾ ಜೂನಿಯರ್ಸ್ ಫೈನಲ್ ಗೆ ಲಗ್ಗೆ ಇಟ್ಟ ಭಾವ ತೀವ್ರತೆಯ ಅಭಿನೇತ್ರಿ 'ರಿಷಿಕಾ ಕುಂದೇಶ್ವರ'..! -