LATEST NEWS
ವಿಜಯಪುರ-ಮಂಗಳೂರು ರೈಲು ಮಂಗಳೂರು ಸೆಂಟ್ರಲ್ ಗೆ ವಿಸ್ತರಣೆ
ಮಂಗಳೂರು ಜನವರಿ 11 : ಮಂಗಳೂರು ಜಂಕ್ಷನ್ ನಿಂದ ವಿಜಯಪುರಕ್ಕೆ ಹೊರಡುತ್ತಿದ್ದ 07377/78 ರೈಲನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಲ ಪಾಲಕ್ಕಾಡ್ ರೈಲ್ವೆ ವಿಭಾಗ ಹಸಿರು ನಿಶಾನೆ ತೋರಿಸಿದೆ.
ಕಳೆದ ಕೆಲವು ವರ್ಷಗಳಿಂದ ಈ ರೈಲನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಬೇಕು ಎನ್ನುವ ಬೇಡಿಕೆಯನ್ನು ರೈಲ್ವೆ ಹೋರಾಟಗಾರರು ಹಾಗೂ ಪ್ರಯಾಣಿಕರು ರೈಲ್ವೆ ಅಧಿಕಾರಿಗಳ ಮುಂದೆ ಮಂಡಿಸುತ್ತಲೇ ಇದ್ದರು. ಆದರೆ, ಮಂಗಳೂರು ಸೆಂಟ್ರಲ್‌ನಲ್ಲಿ ಪ್ಲಾಟ್‌ಫಾರಂ ಕೊರತೆ ಇದೆ ಎಂಬ ನೆಪ ಹೇಳಿ ಪಾಲಕ್ಕಾಡ್ ರೈಲ್ವೆ ವಿಭಾಗ ವಿಜಯಪುರ-ಮಂಗಳೂರು ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ನಿರಾಕರಿಸಿತ್ತು.
ಇದೀಗ ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಪ್ಲಾಟ್‌ಫಾರಂ ನಿರ್ಮಾಣಗೊಂಡ ಕಾರಣ ರೈಲು ನಿಲುಗಡೆಗೆ ಸ್ಥಳಾವಕಾಶ ಸಿಕ್ಕಿದ್ದು, ಬಹಳ ಹಿಂದಿನ ಬೇಡಿಕೆಯಾದ ವಿಜಯಪುರ-ಮಂಗಳೂರು ರೈಲನ್ನು ಮಂಗಳೂರು ಜಂಕ್ಷನ್‌ನಿಂದ ಸೆಂಟ್ರಲ್‌ವರೆಗೆ ವಿಸ್ತರಿಸಲು ಪಾಲಕ್ಕಾಡ್ ರೈಲ್ವೆ ವಿಭಾಗ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್‌ಗೆ ಮಧ್ಯಾಹ್ನ 12.30ಕ್ಕೆ ತಲುಪುತ್ತಿದ್ದ ರೈಲು ಮಂಗಳೂರು ಸೆಂಟ್ರಲ್‌ಗೆ ಮಧ್ಯಾಹ್ನ 1 ಗಂಟೆಗೆ ತಲುಪಲಿದೆ. ಮಧ್ಯಾಹ್ನ 2.35ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ವಿಜಯಪುರಕ್ಕೆ ನಿರ್ಗಮಿಸಲಿದೆ.