LATEST NEWS
ವಾರದ ಲಾಕ್ ಡೌನ್ ನಂತರ ಅನ್ ಲಾಕ್ ಆದ ದಕ್ಷಿಣಕನ್ನಡ ಜಿಲ್ಲೆ
ಮಂಗಳೂರು, ಜುಲೈ 23 : ರಾಜ್ಯದಲ್ಲೇ ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಕೊರೊನಾ ಪ್ರಕರಣ ಇರುವ ಜಿಲ್ಲೆಯಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದು ವಾರದ ಲಾಕ್ ಡೌನ್ ನಂತರ ಇಂದು ಸಹಜ ಸ್ಥಿತಿಗೆ ಮರಳಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಹಿನ್ನಲೆ ಜಿಲ್ಲಾಡಳಿತ ಒಂದು ವಾರ ಸಂಪೂರ್ಣ ಲಾಕ್ ಡೌನ್ ಹೇರಿತ್ತು. ವಾರದ ಲಾಕ್ ಡೌನ್ ಇಂದು ಬೆಳಗ್ಗೆ ಮುಕ್ತಾಯವಾಗಿದ್ದು, ವಾಣಿಜ್ಯ ಚಟುವಟಿಕೆಗಳನ್ನು ಅವಕಾಶ ನೀಡಲಾಗಿರುವ ಹಿನ್ನಲೆಯಲ್ಲಿ ಜಿಲ್ಲೆ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ.
ಅಂಗಡಿ ಮುಂಗಟ್ಟುಗಳು ತೆರೆದಿದ್ದು ವ್ಯಾಪಾರ ವಹಿವಾಟು ಆರಂಭವಾಗಿದೆ. ಇಂದು ಬೆಳಗ್ಗೆ 5 ಗಂಟೆಯ ಅನಂತರ ಲಾಕ್ ಡೌನ್ ತೆರವುಗೊಂಡಿದ್ದು ಈ ಹಿಂದೆ ಅನುಮತಿ ನೀಡಿದ್ದ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆ , ಮಾಲ್ ಗಳು, ಖಾಸಗಿ ಹಾಗೂ ಸರಕಾರಿ ಕಚೇರಿಗಳು ಕಾರ್ಯಾರಂಭಿಸಿದೆ. ಮದ್ಯ ಮಾರಾಟಕ್ಕೂ ಅನುಮತಿ ನೀಡಲಾಗಿದೆ.
ಇನ್ನು ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಪ್ರಯಾಣಿಕರ ಸೇವೆಗಿಳಿದಿದ್ದು ಈ ಮೂಲಕ ವಿರಳವಾದರೂ ಜನಸಂಚಾರ ಆರಂಭವಾಗಿದೆ. ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ಕನಿಷ್ಟ ಸಿಬ್ಬಂದಿಯೊಂದಿಗೆ ಕೆಲಸ ಆರಂಭಿಸಿದೆ.