LATEST NEWS
ಅಗಸ್ಟ್ 11 ರಿಂದ ಮಂಗಳೂರು ವಿವಿ ಪದವಿ ಪರೀಕ್ಷೆ ಪ್ರಾರಂಭ

ಮಂಗಳೂರು ಅಗಸ್ಟ್ 05: ನೆರೆಯ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾದ ಹಿನ್ನಲೆ ಮುಂದೂಡಲ್ಪಟ್ಟಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳನ್ನು ಅಗಸ್ಟ್ 11 ರಿಂದ ಮತ್ತೆ ನಡೆಸಲು ತೀರ್ಮಾನಿಸಲಾಗಿದೆ.
ಕಾಸರಗೋಡಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾದ ಕಾರಣ ಗಡಿಭಾಗದ ವಿಧ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನಾನುಕೂಲ ಹಾಗೂ ಸೊಂಕು ವ್ಯಾಪಿಸುವ ಸಾಧ್ಯತೆ ಹಿನ್ನಲೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ರದ್ದು ಪಡಿಸಿದ್ದರು.

ಆದರೆ ಪರೀಕ್ಷೆ ರದ್ದತಿ ಬಗ್ಗೆ ಅಪಸ್ವರ ಕೇಳಿ ಬಂದ ಹಿನ್ನಲೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಜಿಲ್ಲಾಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಮತ್ತೆ ರದ್ದು ಪಡಿಸಲಾದ ಪರೀಕ್ಷೆಗಳನ್ನು ಅಗಸ್ಟ್ 11 ರಿಂದ ನಡೆಸಲು ತೀರ್ಮಾನಿಸಲಾಗಿದೆ.
ಹೊರ ರಾಜ್ಯಗಳಿಂದ ಬರುವ ವಿಧ್ಯಾರ್ಥಿಗೆ ಕೊರೊನಾ ಅಥವಾ ವಾಹನ ಸೌಲಭ್ಯದಿಂದಾಗಿ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇದ್ದರೆ ಅವರಿಗೆ ವಿಶೇಷ ಪರೀಕ್ಷೆ ನಡೆಸಲು ವಿವಿ ತೀರ್ಮಾನಿಸಿದೆ. ಅಲ್ಲದೆ ಪ್ರವೇಶ ಪತ್ರಕ್ಕೆ ಸಂಬಂಧಿಸಿದಂತೆ ಕಾಲೇಜು ಶುಲ್ಕವನ್ನು ವಿಧ್ಯಾರ್ಥಿಗಳಿಂದ ಒತ್ತಾಯಪೂರ್ವಕವಾಗಿ ತೆಗೆದುಕೊಳ್ಳುವಂತಿಲ್ಲ, ಶುಲ್ಕ ಪಾವತಿಸದ ವಿಧ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಬೇಕೆಂದು ಆದೇಶಿಸಲಾಗಿದ್ದು, ಪರೀಕ್ಷೆಗಳನ್ನು ಕೋವಿಡ್ 19 ಮಾರ್ಗದರ್ಶಿ ಸೂತ್ರಗಳನ್ವಯ ನಡೆಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಹಿನ್ನಲೆ ಬಾಕಿ ಇರುವ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ಅಗಸ್ಟ್ 11 ರಿಂದ ಪ್ರಾರಂಭಿಸಲಾಗುವುದು, ಈ ಬಗ್ಗೆ ಪರೀಕ್ಷಾ ವೇಳಾಪಟ್ಟಿನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಮಂಗಳೂರು ವಿವಿ ಕುಲಪತಿಯವರ ಪ್ರಕಟಣೆ ತಿಳಿಸಿದೆ.