LATEST NEWS
ಮಂಗಳೂರು ಶ್ರೀಮಂತ ನಗರ ಎಂದು ಕೆಲಸಕ್ಕೆ ಬಂದವರು ಸೀದಾ ಇಳಿದಿದ್ದು ಕಳ್ಳತನಕ್ಕೆ

ಮಂಗಳೂರು ಜುಲೈ 13: ಮಂಗಳೂರಿನಲ್ಲಿ ಇತ್ತೀಚೆಗೆ ಕಳ್ಳತನ ದರೋಡೆ ಪ್ರಕರಣಗಳು ಏರಿಕೆಯಾಗಿದ್ದು, ಪೊಲೀಸರು ಕಳ್ಳರ ಬೆನ್ನ ಹಿಂದೆ ಬಿದ್ದು ಪ್ರಕರಣ ದಾಖಲಾದ ಕೆಲವೇ ಘಂಟೆಗಳಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಅದೇ ರೀತಿ ಕಪಿತಾನಿಯಾ ಬಳಿ ದಿನಸಿ, ಅಂಗಡಿಯಿಂದ 10 ಲಕ್ಷರು. ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನ ಉತ್ತರ ಪ್ರದೇಶ ಮೂಲದ ಮಹಮ್ಮದ್ ನಜೀರ್ ಹೌಸಿಲ್ ಖಾನ್ (27) ಇಲಿಯಾಸ್ (22) ಎಂದು ಗುರುತಿಸಲಾಗಿದೆ. ಘಟನೆ ನಡೆದ 16 ಗಂಟೆಯಲ್ಲೇ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಕಂಕನಾಡಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜುಲೈ 8 ರಂದು ಕಪಿತಾನಿಯೋ ಸಮೀಪವಿರುವ ಲೋಟಸ್ ಗ್ಯಾಲಕ್ಸಿ ಕಾಂಪ್ಲೆಕ್ಸ್‌ನ ಬಿಎಚ್ ಟ್ರೇಡರ್ಸ್ ಎಂಬ ದಿನಸಿ ಅಂಗಡಿಯ ಶೆಟರ್‌ನ್ನು ಇಬ್ಬರು ಕಳ್ಳರು 10 ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದರು.
ಕೃತ್ಯ ಸ್ಥಳದ ಮತ್ತು ಪಂಪ್‌ವೆಲ್ ಸುತ್ತ ಮುತ್ತ ದೊರೆತ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ರಾತ್ರಿ ವೇಳೆ ಸಂಚರಿಸಿದ ಸಂಶಯಿತರ ಬಗ್ಗೆ ಆಟೋರಿಕ್ಷಾ ಚಾಲಕರನ್ನೆಲ್ಲ ಪೊಲೀಸರು ವಿಚಾರಿಸಿದಾಗ ಕೃತ್ಯ ನಡೆದ ರಾತ್ರಿ ಇಬ್ಬರು ಹಿಂದಿ ಮಾತನಾಡುವ ಸಂಶಯಿತರನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟ ಬಗ್ಗೆ ಮಾಹಿತಿ ದೊರಕಿತ್ತು.

ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್‌ನಲ್ಲಿ ಅದೇ ದಿನ ರಾತ್ರಿ ಇಬ್ಬರು ಮಂಗಳೂರಿನಿಂದ ಪುಣೆಗೆ ಎರಡು ಟಿಕೆಟ್ ಬುಕ್ ಮಾಡಿ ಹೊರಟಿರುವ ಬಗ್ಗೆ ಮಾಹಿತಿಯನ್ನು ಪೊಲೀಸರು ಮಾಹಿತಿ ತಿಳಿದುಕೊಂಡಿದ್ದಾರೆ. ರಾತ್ರಿ 8.30 ರ ಸುಮಾರಿಗೆ ರೈಲು ಮಹಾರಾಷ್ಟ್ರದ ಸತಾರ ದಾಟಿ ಮುಂದೆ ಹೋಗುತ್ತಿದ್ದು 11.45 ರ ವೇಳೆಗೆ ಪುಣೆ ತಲುಪುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಮಾಹಿತಿ ರವಾನಿಸಿ ವಶಕ್ಕೆ ಪಡೆಯಲು ತಿಳಿಸಿದ್ದರು. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಕೂಡ ಮಾಹಿತಿ ನೀಡಿದ್ದು, ಆಯುಕ್ತರು ಪುಣೆಯ ಜಿಆರ್‌ಪಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅದೇ ರಾತ್ರಿ 11.45ರ ವೇಳೆಗೆ ಪುಣೆಯ ಆರ್‌ಪಿಎಫ್ ಹಾಗೂ ಜಿಆರ್‌ಪಿ ಪೊಲೀಸರು ಇಬ್ಬರು ಸಂಶಯಿತರನ್ನುವಶಕ್ಕೆ ಪಡೆದುವಿಚಾರಿಸಿದ್ದಾರೆ. ಅವರ ಬಳಿ ಬ್ಯಾಗ್ ಇರದೇ ಇದ್ದು ಕೃತ್ಯದ ಬಗ್ಗೆ ಹೇಳಿರಲಿಲ್ಲ. ಅವರನ್ನು ಅಲ್ಲಿಯೇ ಹಿಡಿದಿಟ್ಟುಕೊಳ್ಳುವಂತೆ ಮನವಿ ಮಾಡಿಕೊಂಡ ನಂತರ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ನೇತೃತ್ವದ ತಂಡ ಕೂಡಲೇ ಪುಣೆಗೆ ತೆರಳಿ ಬಿಆರ್‌ಪಿ ಪೊಲೀಸರ ವಶದಲ್ಲಿದ್ದ ಇಬ್ಬರನ್ನು ವಿಚಾರಿಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಬಂಧಿತ ಆರೋಪಿಗಳನ್ನು ವಿಚಾರಿಸಿದಾಗ ಇಬ್ಬರು ಉತ್ತರಪ್ರದೇಶ ರಾಜ್ಯದವರಾಗಿದ್ದು, ಈಗಾಗಲೇ ಹಲವು ಜನರು ಮಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದು, ಮಂಗಳೂರು ಶ್ರೀಮಂತ ನಗರವಾಗಿದ್ದು, ಇಲ್ಲಿ ಅನೇಕ ಹೋಟೆಲ್ ಉದ್ಯಮ ಮತ್ತು ಹೆಚ್ಚಿನ ಕೈಗಾರಿಕೆಗಳು ಇರುವುದರಿಂದ ನಾವುಗಳು ಕೇಟರಿಂಗ್ ಕೆಲಸ ಅಥವಾ ಯಾವುದಾದರು ಕೆಲಸ ಮಾಡುವ ಸಲುವಾಗಿ ಬಂದಿದ್ದೆವು. ಕೆಲಸ ತಕ್ಷಣಕ್ಕೆ ಸಿಗದೇ ಇದ್ದುದರಿಂದ ಮತ್ತು ಹಣ ಖರ್ಚಾಗಿದ್ದರಿಂದ ಸಣ್ಣ ಪುಟ್ಟ ಕಳ್ಳತನ ಮಾಡಲು ನಿರ್ಧರಿಸಿದ್ದೆವು ಎಂದಿದ್ದಾರೆ.