LATEST NEWS
ಮಂಗಳೂರು ದಕ್ಷಿಣ ವ್ಯಾಪ್ತಿಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದ ಶಾಸಕ ಕಾಮತ್
ಮಂಗಳೂರು ಸೆಪ್ಟೆಂಬರ್ 06: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಸಭೆ ಬುಧವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಈ ಸಭೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಭಾಗವಹಿಸಿ ಮಂಗಳೂರು ದಕ್ಷಿಣ ವ್ಯಾಪ್ತಿಯ ಹಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿ ಅಧಿಕಾರಿಗಳ ಗಮನ ಸೆಳೆದರು.
ಕೆಪಿಟಿ ಜಂಕ್ಷನ್‍ನಲ್ಲಿ ಫ್ಲೈ ಓವರ್ ಮತ್ತು ನಂತೂರು ಜಂಕ್ಷನ್ ನಲ್ಲಿ ಫ್ಲೈ ಓವರ್ ಪ್ರಸ್ತಾವನೆಯ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪಂಪ್ ವೆಲ್ ಜಂಕ್ಷನ್ ಮತ್ತು ಪಡಿಲ್ ಜಂಕ್ಷನ್, ಕಣ್ಣೂರು ಜಂಕ್ಷನ್‍ಗಳಲ್ಲಿ ಮಳೆಗಾಲದಲ್ಲಿ ಆಗುವ ತೊಂದರೆ ಮತ್ತು ಪಂಪ್ ವೆಲ್ ಫ್ಲೈ ಓವರ್ ಅಡಿಯಲ್ಲಿ ಮಳೆ ಸಂದರ್ಭ ನೀರು ನಿಲುಗಡೆಗೆ ಸಮಸ್ಯೆಗೆ ಹೊಸ ಪ್ಲಾನ್ ಮಾಡುವ ಬಗ್ಗೆಯೂ ಪ್ರಸ್ತಾಪ ಮಾಡಿದರು.
ಉಜ್ಜೊಡಿ ಅಂಡರ್ ಪಾಸ್ ಕೆಳಗೆ ವಾಹನ ತಿರುಗುವ ಜಾಗದಲ್ಲಿ ಸಮಸ್ಯೆ, ಎಕ್ಕೂರು ರೈಲ್ವೆ ಸೇತುವೆ ಬಳಿಯ ಸರ್ವಿಸ್ ರೋಡ್ ನಲ್ಲಿ ವಾಹನಗಳು ಅಡ್ಡಾದಿಡ್ಡಿ ಚಲಿಸುತ್ತವೆ ಎಂದು ಗಮನ ಸೆಳೆದರು. ಬಿಕರ್ನಕಟ್ಟೆ, ಕುಡುಪು, ಸಾಣೂರು ರಾಷ್ಟ್ರೀಯ ಹೆದ್ದಾರಿ ಬಗ್ಗೆ ಭೂ ಸ್ವಾಧಿನ ಸಮಸ್ಯೆ ಇದೆ, ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಬಗೆಗಿನ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆದರು. ನಗರ ದಕ್ಷಿಣದ ವ್ಯಾಪ್ತಿಯಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ, ಚರಂಡಿ ಶುಚಿ, ಹೊಂಡಗಳನ್ನು ಮುಚ್ಚುವ ಕೆಲಸಗಳ ಬಗ್ಗೆ, ಸೂಕ್ತ ಸೂಚನಾ ಫಲಕಗಳ ಅಳವಡಿಕೆ, ಸ್ಟ್ರೀಟ್ ಲೈಟ್ ಮತ್ತು ಮೆಸ್ಕಾಂ ವ್ಯವಸ್ಥೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.
ರಾಷ್ಟ್ರೀಯ ಹೆದ್ದಾರಿಗೋಸ್ಕರ ಜಾಗ ಬಿಟ್ಟುಕೊಟ್ಟಿರುವ ಸಾರ್ವಜನಿಕರ ಜಾಗಕ್ಕೆ ಸಂಬಂಧಿಸಿ ಬೇಗನೆ ಪರಿಹಾರ ಬಿಡುಗಡೆ ಆಗುವಂತೆ ಸರಕಾರದ ಮೇಲೆ ಒತ್ತಡ ಹಾಕುವಂತೆಯೂ ಶಾಸಕ ಕಾಮತ್ ಸಭೆಯಲ್ಲಿ ಪ್ರಸ್ತಾಪ ಮಾಡಿದರು.