DAKSHINA KANNADA
ಶಬರಿಮಲೆ ವಸ್ತುಸ್ಥಿತಿ ಪರಿಶೀಲನೆಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ, ಕೇರಳ ಪೋಲೀಸರಿಂದ ಬಂಧನದ ಸಾಧ್ಯತೆ
ಶಬರಿಮಲೆ ವಸ್ತುಸ್ಥಿತಿ ಪರಿಶೀಲನೆಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ, ಕೇರಳ ಪೋಲೀಸರಿಂದ ಬಂಧನದ ಸಾಧ್ಯತೆ
ಮಂಗಳೂರು ,ನವೆಂಬರ್ 20 : ಶಬರಿಮಲೆಯಲ್ಲಿ ಎದುರಾಗಿರುವ ಪ್ರಸ್ತುತ ಸ್ಥಿತಿಗತಿಗಳ ಕುರಿತು ಕೇಂದ್ರಕ್ಕೆ ವರದಿ ನೀಡುವ ಸಲುವಾಗಿ ಅಧ್ಯಯನ ವರದಿ ತಯಾರಿಸಲು ದಕ್ಷಿಣಕನ್ನಡ ಲೋಕಸಭಾ ಸದಸ್ಯ ಹಾಗು ಕೇರಳ ಸಹ ಪ್ರಭಾರಿ ನಳಿನ್ ಕುಮಾರ್ ಕಟೀಲ್ ಶಬರಿಮಲೆ ತಲುಪಿದ್ದಾರೆ.
ಇಂದು ಮುಂಜಾನೆ ಕೇರಳದ ಚೆಂಗನ್ನೂರು ತಲುಪಿದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಸಂಸದ ವಿ.ಮುರಳೀಧರನ್ ರಾಜ್ಯ ಕಾರ್ಯದರ್ಶಿ ಜೆ.ಆರ್. ಪದ್ಮಕುಮಾರ್ ಮತ್ತು ಪಥನಂತಿಟ್ಟ ಜಿಲ್ಲೆಯ ಅಧ್ಯಕ್ಷ ಅಶೋಕನ್ ಜೊತೆ ಚರ್ಚೆ ನಡೆಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಿಲಕ್ಕಲ್, ಪಂಪಾ ಹಾಗೂ ಸನ್ನಿದಾನ ಪ್ರದೇಶಗಳಿಗೆ ಭೇಟಿ ನೀಡಿ ಅಯ್ಯಪ್ಪ ಭಕ್ತರ ಸಮಸ್ಯೆಗಳ ಸದ್ಯ ಅಲ್ಲಿನ ಪರಿಸ್ಥಿತಿ ಬಗ್ಗೆ ಅಧ್ಯಯನ ವರದಿ ತಯಾರಿಸಲಿದ್ದಾರೆ.
ಅಲ್ಲದೆ ಮಾಲಾಧಾರಿಯಾಗಿ ತೆರಳಿರುವ ಅವರು ಶಬರಿಮಲೆ ಅಯ್ಯಪ್ಪ ದೇವರ ದರ್ಶನವನ್ನೂ ಪಡೆಯಲಿದ್ದಾರೆ.
ಅಧ್ಯಯನ ನಡೆಸಿ ತಯಾರಿಸಿದ ವರದಿಯನ್ನು ಕೇಂದ್ರ ಬಿಜೆಪಿ ನಾಯಕರುಗಳಿಗೆ ನಳಿನ್ ಕುಮಾರ್ ಕಟೀಲ್ ಸಲ್ಲಿಸಲಿದ್ದಾರೆ.
ಈ ನಡುವೆ ಕೇರಳದ ಬಿಜೆಪಿ ನಾಯಕ ಸುರೇಂದ್ರನ್ ಶಬರಿಮಲೆ ತೆರಳುವ ಸಂದರ್ಭದಲ್ಲಿ ಪೊಲೀಸರು ಬಂಧಿಸಿ ಶಬರಿಮಲೆಗೆ ತೆರಳದಂತೆ ತಡೆಯೊಡ್ಡಿದ್ದರು.
ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈಗ ಮತ್ತೆ ಬಿಜೆಪಿ ಸಂಸದ ನಳಿನ ಕುಮಾರ್ ಕಟೀಲ್ ಪ್ರಸ್ತುತ ಪರಿಸ್ಥತಿ ಕುರಿತು ವರದಿ ತಯಾರಿಸಲು ಶಬರಿಮಲೆಗೆ ತೆರಳಿದ್ದಾರೆ.
ಮೂಲಗಳ ಪ್ರಕಾರ ಶಬರಿಮಲೆಗೆ ಭೇಟಿ ನೀಡಿರುವ ಸಂಸದ ನಳಿನ್ ಕುಮಾರ್ ಕಲಟೀಲ್ , ರಾಜ್ಯ ಸಭಾ ಸದಸ್ಯ ವಿ.ಮುರಳೀಧರನ್ ಸೇರಿದಂತೆ ತಂಡ ದಲ್ಲಿರುವ ಎಲ್ಲಾ ಬಿಜೆಪಿ ಮುಖಂಡರನ್ನು ಕೇರಳ ಪೋಲೀಸರು ಬಂಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಒಂದು ವೇಳೆ ನಳಿನ್ ಕುಮಾರ್ ಕೇರಳದಲ್ಲಿ ಬಂಧನವಾದಲ್ಲಿ ದಕ್ಷಿಣಕನ್ನಡ ಜಿಲ್ಲಯಲ್ಲಿಯೂ ಕೇರಳ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗಳು ತೀವೃಗೊಳ್ಳುವ ಸಾಧ್ಯತೆಗಳೂ ಇದೆ.
ವಾರ್ಷಿಕ ಮಕರವಿಳಕ್ಕು ಹಾಗೂ ಮಂಡಲ ಪೂಜೆ ನಿಮಿತ್ತ ಎರಡು ತಿಂಗಳ ದರ್ಶನಕ್ಕಾಗಿ ಶುಕ್ರವಾರ ನವೆಂಬರ್ 16 ಸಂಜೆಯಿಂದ ದೇವಸ್ಥಾನದ ಬಾಗಿಲು ತೆರೆದಿದ್ದು, ಶನಿವಾರ ನೆಂಬರ್ 17 ರಿಂದ ಆಯ್ಯಪ್ಪನ ದರ್ಶನ ಆರಂಭವಾಗಿದೆ.
ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನೂರಾರು ಭಕ್ತರು ದರ್ಶನ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಶಬರಿಮಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾವಿರಾರು ಪೊಲೀಸರು ಬಿಗಿ ಬಂದೋಬಸ್ತ್ ನಡೆಸಿದ್ದಾರೆ.