ಡ್ರೈನೇಜ್ ಕಾಮಗಾರಿ ನಡೆಸದೆಯೇ ರಸ್ತೆ ಕಾಂಕ್ರೀಟೀಕರಣ, ಬಂಟ್ಸ್ ಹಾಸ್ಟೇಲ್ ಆಗುತ್ತಿದೆಯೇ ಅಧಿಕಾರಿಗಳ-ಜನಪ್ರತಿನಿಧಿಗಳ ಮೇಯುವ ತಾಣ ?

ಮಂಗಳೂರು, ನವಂಬರ್ 20: ದನಗಳಿಗೆ ಮೇಯಲು ಯಾವ ರೀತಿಯಲ್ಲಿ ಗೋಮಾಳಗಳನ್ನು ನಿರ್ಮಿಸಲಾಗುತ್ತದೋ, ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಪ್ರತಿವರ್ಷ ಹಣ ಮಾಡಲು ಕೆಲವೊಂದು ಕಾಮಗಾರಿಗಳನ್ನು ಮೀಸಲು ಇಡಲಾಗುತ್ತಿದೆ.

ಹೌದು ಇದಕ್ಕೊಂದು ಸೂಕ್ತ ಉದಾಹರಣೆ ಮಂಗಳೂರಿನ ಬಂಟ್ಸ್ ಹಾಸ್ಟೇಲ್ ನಿಂದ ಪಿವಿಎಸ್ ವೃತ್ತದವರೆಗೆ ನಡೆಯುತ್ತಿರುವ ಕಾಂಕ್ರೀಟ್‌ ರಸ್ತೆ ಕಾಮಗಾರಿ.

ಈ ರಸ್ತೆಯು ಈಗಾಗಲೇ ಕಾಂಕ್ರೀಟ್ ರಸ್ತೆಯಾಗಿದ್ದು, ಇದೀಗ ಮಂಗಳೂರು ಮಹಾನಗರ ಪಾಲಿಕೆ 80 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ನಾಲ್ಕು ಮೀಟರ್ ಅಗಲಗೊಳಿಸುವ ಯೋಜನೆಯನ್ನು ಆರಂಭಿಸಿದೆ.

ಈಗಾಗಲೇ ಬಂಟ್ಸ್ ಹಾಸ್ಟೇಲ್ ನಿಂದ ಮೆಡಿಫೇರ್ ಕಟ್ಟಡದ ವರೆಗಿನ ಕಾಮಗಾರಿ ನಡೆದಿದ್ದು, ಇದೀಗ ಮೆಡಿಫೇರ್ ಕಟ್ಟಡದ ಬಳಿಯಿಂದ ಕಾಮಗಾರಿಯನ್ನು ಆರಂಭಿಸಲಾಗಿದೆ.

ಆದರೆ ಮೆಡಿಫೇರ್ ಕಟ್ಟಡಕ್ಕೆ ಸಂಬಂಧಪಟ್ಟ ಡ್ರೈನೇಜ್ ನೀರನ್ನು ಮುಖ್ಯ ಒಳಚರಂಡಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಕೆಲಸವನ್ನು ಹಾಗೆಯೇ ಬಿಟ್ಟು ಕಾಂಕ್ರೀಟ್ ಕಾಮಗಾರಿಯ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಡ್ರೈನೇಜ್ ಕಾಮಗಾರಿಯು ಮಹಾನಗರ ಪಾಲಿಕೆಗೆ ಪ್ರತಿವರ್ಷ ವಸೂಲಿಗೆ ಅವಕಾಶ ನೀಡುವ ಪ್ರಮುಖ ಕೇಂದ್ರವಾಗಿದ್ದು, ಇದೇ ಕಾರಣಕ್ಕಾಗಿಯೋ ಏನೋ ಚರಂಡಿ ಸಂಪರ್ಕ ಕಾಮಗಾರಿಯನ್ನು ಇದ್ದಹಾಗೇ ಬಿಟ್ಟು ಕಾಂಕ್ರೀಟೀಕರಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ವರ್ಷಗಳ ಹಿಂದೆ ಮೆಡಿಫೇರ್ ಕಟ್ಟಡದ ನೀರು ಡ್ರೈನೇಜ್ ಮೂಲಕ ಮೇಲ್ಮುಖವಾಗಿ ಹರಿಯುತ್ತಿದ್ದ ವ್ಯವಸ್ಥೆಯನ್ನು ಬಂದ್ ಮಾಡಿ ನೀರನ್ನು ಕೆಳಮುಖವಾಗಿ ಹರಿಯುವ ವ್ಯವಸ್ಥೆಯನ್ನು ಪಾಲಿಕೆಯಿಂದ ಮಾಡಲಾಗಿತ್ತು.

ಅಲ್ಲದೆ ಈ ನೀರು ರಸ್ತೆಯಲ್ಲೆಲ್ಲಾ ಹರಿದು ದುರ್ನಾತಕ್ಕೆ ಕಾರಣವಾಗುತ್ತಿರುವುದನ್ನು ತಡೆಯಲು ಹಿಂದಿನ ಶಾಸಕ ಜೆ.ಆರ್.ಲೋಬೋ 10 ಲಕ್ಷ ರೂಪಾಯಿಯನ್ನು ತೆಗೆದಿರಿಸಿ ಶಾಶ್ವತ ಪರಿಹಾರಕ್ಕೆ ಚಿಂತನೆಯನ್ನೂ ನಡೆಸಿದ್ದರು.

ಆದರೆ ಈ ಕಾಮಗಾರಿಯನ್ನು ಕಟ್ಟಡದ ಮಾಲಕರೇ ನಡೆಸಬೇಕು ಎನ್ನುವ ಮಹಾನಗರ ಪಾಲಿಕೆಯ ಸದಸ್ಯರ ಒತ್ತಾಯದ ಹಿನ್ನಲೆಯಲ್ಲಿ ಯೋಜನೆಯನ್ನು ಅಲ್ಲಿಗೇ ಕೈ ಬಿಡಲಾಗಿತ್ತು.

ಆದರೆ ಇದೀಗ ಕಾಂಕ್ರೀಟೀಕರಣ ಮಾಡುವ ಸಂದರ್ಭದಲ್ಲಿ ಈ ಡ್ರೈನೇಜ್ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡದೆ ತಿಂಗಳಿಗೊಮ್ಮೆಯಾದರೂ, ಈ ಸಮಸ್ಯೆ ಹೆಚ್ಚಾಗಲಿ ಎನ್ನುವ ಇಂಗಿತದಿಂದಲೋ ಡ್ರೈನೇಜನ್ನು ಇದ್ದ ಹಾಗೇ ಬಿಟ್ಟು ಕಾಂಕ್ರೀಟೀಕರಣ ನಡೆಸಲು ಪಾಲಿಕೆಯ ಎಂಜಿನಿಯರ್ ಗಳು ಹಾಗೂ ಗುತ್ತಿಗೆದಾರರು ಮುಂದಾಗಿದ್ದಾರೆ.

ಈ ರೀತಿ ಮಾಡುವುದರಿಂದ ಡ್ರೈನೇಜ್ ಗಾಗಿ ಪ್ರತಿ ತಿಂಗಳು ಪಾಲಿಕೆಯಿಂದ ಹಣ ಬಿಡುಗಡೆ ಮಾಡಬಹುದು ಹಾಗೂ ಹಣದಿಂದ ಎಲ್ಲರಿಗೂ ತೀರ್ಥ ಪ್ರಸಾದವನ್ನು ನೀಡಬಹುದು ಎನ್ನುವ ಯೋಜನೆ ಪಾಲಿಕೆಯ ಮುಂದಿದೆಯೋ ಎನ್ನುವ ಕುತೂಹಲವೂ ಸ್ಥಳೀಯರ ಮುಂದಿದೆ.

ಕಾಂಕ್ರೀಟೀಕರಣಕ್ಕಾಗಿ ಈಗಾಗಲೇ ರಸ್ತೆಯ ಬದಿಯನ್ನು ಅಗೆಯಲಾಗಿದ್ದು, ಡ್ರೈನೇಜ್ ನೀರು ಮಾತ್ರ ರಸ್ತೆ ತುಂಬಾ ಹರಿಯಲು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಕಾಂಕ್ರೀಟ್ ರಸ್ತೆಯೂ ಡ್ರೈನೇಜ್ ನೀರಿನ ಪಾಲಾಗಲಿದೆ ಎನ್ನುವ ಅಭಿಪ್ರಾಯಗಳೂ ಕೇಳಿ ಬರುತ್ತಿದೆ.

Facebook Comments

comments