LATEST NEWS
ಮಂಗಳೂರು – ವಾಹನಗಳಲ್ಲಿ ಎಲ್ಐಡಿ ಲೈಟ್ 1170 ಪ್ರಕರಣ ದಾಖಲಿಸಿ 5.85 ಲಕ್ಷ ದಂಡ ವಸೂಲಿ
ಮಂಗಳೂರು ಜುಲೈ 24: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಿತ ಎಲ್ ಇಡಿ ಲೈಟ್ ಹಾಕಿದ್ದ ವಾಹನಗಳ ವಿರುದ್ದ ಕ್ರಮ ಜರುಗಿಸಲಾಗುತ್ತಿದ್ದು, ಇಲ್ಲಿಯವರೆಗೆ ಈವರೆಗೆ ಒಟ್ಟು 1170 ಪ್ರಕರಣಗಳನ್ನು ದಾಖಲಿಸಿ 5,86,500/- ದಂಡವನ್ನು ವಿಧಿಸಲಾಗಿದೆ.
ಹೆಚ್ಚು ಪ್ರಖರ ಬೆಳಕು ಹೊರಹಾಕುವ ಹಾಗೂ ಕಣ್ಣು ಕುಕ್ಕುವ ದೀಪಗಳನ್ನು ವಾಹನಗಳಲ್ಲಿ ಆಳವಡಿಸಿ ನಗರ ವ್ಯಾಪ್ತಿಯಲ್ಲಿ ಚಾಲನೆ ಮಾಡುವ ವಾಹನಗಳ ವಿರುದ್ದ ಜೂನ್ 15, 2024 ರಿಂದ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿ ಕೇಂದ್ರ ಮೋಟಾರು ವಾಹನ ಕಾಯ್ದೆ 1989 ರಲ್ಲಿ ನಮೂದಿಸಿರುವ ಮಾನದಂಡದಂತೆ ಅಳವಡಿಸಬೇಕಾದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಹೆಡ್ ಲೈಟ್ ಗಳನ್ನು ಆಳವಡಿಸಿರುವ, ಹೆಡ್ ಲೈಟ್ ಗಳನ್ನು ಮಾರ್ಪಡಿಸಿರುವ, ಹೆಚ್ಚುವರಿ ಎಲ್.ಇ.ಡಿಗಳನ್ನು ಅಳವಡಿಸಿರುವ, ಕಣ್ಣಿಗೆ ಕುಕ್ಕುವ ಹೆಚ್ಚು ಪ್ರಖರ ಬೆಳಕು ಸೂಸುವ ಬಲ್ಬ್ ಗಳನ್ನು ಅಳವಡಿಸಿರುವ, ಕಮಿಷನರೇಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಬೀದಿ ದೀಪಗಳನ್ನು ಹೊಂದಿರುವ ಎಲ್ಲಾ ರಸ್ತೆಗಳಲ್ಲಿ ಹೈ ಬೀಮ್ ದೀಪಗಳನ್ನು ಬಳಸಿರುವ ವಾಹನ ಚಾಲಕರ ವಿರುದ್ದ ನಗರದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ನಿಯಮ ಉಲ್ಲಂಘಿಸಿದ ವಾಹನ ಚಾಲಕರ ವಿರುದ್ದ ಈವರೆಗೆ ಒಟ್ಟು 1170 ಪ್ರಕರಣಗಳನ್ನು ದಾಖಲಿಸಿ 5,86,500/- ದಂಡವನ್ನು ವಿಧಿಸಲಾಗಿದೆ. ಈ ವಿಶೇಷ ಕಾರ್ಯಾಚರಣೆಯು ಮುಂದಿನ ದಿನಗಳಲ್ಲಿಯೂ ಮುಂದುವರೆಯುವುದು.
ಸಾರ್ವಜನಿಕರಿಗೆ ವಿಶೇಷ ಸೂಚನೆ:-
1. ಸಾರ್ವಜನಿಕರು ತಮ್ಮ ಮೋಟಾರು ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆ-1989 ರಲ್ಲಿ ಸೂಚಿಸಿರುವ ಮಾನದಂಡದಂತೆ ವಿವಿಧ ಮಾದರಿಯ ವಾಹನಗಳಿಗೆ ಸದರಿ ವಾಹನ ಕಂಪೆನಿಯವರು ನಿಗಧಿಪಡಿಸಿದ ಹೆಡ್ ಲೈಟ್ ಗಳನ್ನು ಮಾತ್ರ ಅಳವಡಿಸಬೇಕಾಗಿರುತ್ತದೆ.
2. ಹೆಚ್ಚುವರಿಯಾಗಿ ಅಲಂಕಾರಿಕ ದೀಪಗಳನ್ನು ಹಾಗೂ ಪ್ರಖರ ಬೆಳಕು ಸೂಸುವ ಮತ್ತು ಕಣ್ಣಿಗೆ ಕುಕ್ಕುವ ಎಲ್.ಇ.ಡಿ ಬಲ್ಬ್ ಗಳನ್ನು ಅಳವಡಿಸುವಂತಿಲ್ಲ.
3. ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಬೀದಿದೀಪಗಳು ಇರುವೆಡೆ ಯಾವುದೇ ಕಾರಣಕ್ಕೂ ಹೈಬೀಮ್ ಬೆಳಕಿನೊಂದಿಗೆ ವಾಹನಗಳನ್ನು ಚಲಾಯಿಸುವಂತಿಲ್ಲ.
4. ಮೋಟಾರು ಸೈಕಲ್ ಹಾಗೂ ಆಟೋರಿಕ್ಷಾಗಳು 1 ಅಥವಾ 2 ಹೆಡ್ ಲೈಟ್ ಗಳನ್ನು ಮಾತ್ರ ಹೊಂದುವುದು.
5. 4 ಚಕ್ರ ಮತ್ತು ಹೆಚ್ಚಿನ ಚಕ್ರದ ವಾಹನಗಳು 2 ಅಥವಾ 4 ಹೆಡ್ ಲೈಟ್ ಗಳನ್ನು ಮಾತ್ರ ಹೊಂದುವುದು.
6. ವಾಹನಗಳ ಹೆಡ್ ಲೈಟ್ ಗಳಿಂದ ಹೊರ ಹೊಮ್ಮವ ಬೆಳಕು ಶಾಶ್ವತವಾಗಿ ಕೆಳ ಮುಖವಾಗಿ ಸದರಿ ಹೆಡ್ ಲೈಟ್ ನಿಂದ 8 ಮೀಟರ್ ದೂರದಲ್ಲಿನ ವಾಹನದಲ್ಲಿ ಕುಳಿತಿರುವ ವ್ಯಕ್ತಿಯ ಕಣ್ಣಿಗೆ ಪ್ರಖರವಾಗಿರತಕ್ಕದ್ದಲ್ಲ. ಹಾಗೆಯೇ ಸದರಿ ವಾಹನದ ಬಲಭಾಗದಲ್ಲಿ ಅಳವಡಿಸಿರುವ ಹೆಡ್ ಲೈಟ್ ನಿಂದ ಬಲಕ್ಕೆ 0.5 ಮೀ ದೂರದಲ್ಲಿ ಕುಳಿತಿರುವ ಎದುರಿನ ವಾಹನದಲ್ಲಿನ ವ್ಯಕ್ತಿಯ ಕಣ್ಣಿಗೆ ಪ್ರಖರವಾಗಿರತಕ್ಕದ್ದಲ್ಲ.