LATEST NEWS
ಜುಲೈ 4ಕ್ಕೆ ಪಾಸ್ ಕೊನೆ, ಕಾಸರಗೋಡು – ಮಂಗಳೂರು ಸಂಚಾರಕ್ಕೆ ಮತ್ತೆ ಬ್ರೇಕ್ ?
ಮಂಗಳೂರು, ಜೂನ್ 30: ಕಾಸರಗೋಡು – ಮಂಗಳೂರು ಸಂಚರಿಸುವ ಮಂದಿಗೆ ಕರ್ನಾಟಕ ಸರಕಾರ ಕಹಿಸುದ್ದಿ ನೀಡಿದೆ. ತಲಪಾಡಿ ಚೆಕ್ ಪೋಸ್ಟ್ ನಲ್ಲಿ ನೀಡುತ್ತಿದ್ದ ಪಾಸ್ ಅವಧಿಯನ್ನು ಜುಲೈ 4ರ ವರೆಗೆ ವಿಸ್ತರಿಸಿದ್ದು ಆನಂತರ ಪಾಸ್ ವ್ಯಾಲಿಡಿಟಿ ಇರುವುದಿಲ್ಲ ಅನ್ನುವ ಮುನ್ಸೂಚನೆ ನೀಡಿದೆ.
ಕಾಸರಗೋಡು – ಮಂಗಳೂರು ಸಂಚಾರಕ್ಕಾಗಿ ದಿನವಹಿ ಪಾಸ್ ವ್ಯವಸ್ಥೆ ಮಾಡಿದ್ದು ಅದರ ವ್ಯಾಲಿಡಿಟಿ ಜೂನ್ 30 ಕ್ಕೆ ಕೊನೆಗೊಳ್ಳುತ್ತದೆ. ಈಗ ಅದರ ಅವಧಿಯನ್ನು ಜುಲೈ 4ರ ವರೆಗೆ ವಿಸ್ತರಿಸಲಾಗಿದ್ದು ಇದಕ್ಕಾಗಿ ಮತ್ತೆ ರಿನೀವಲ್ ಮಾಡುವ ಅಗತ್ಯ ಇರುವುದಿಲ್ಲ. ಜೊತೆಗೆ ಹೊಸತಾಗಿ ಅರ್ಜಿ ಸಲ್ಲಿಕೆಗೂ ಅವಕಾಶ ಇರುವುದಿಲ್ಲ ಎನ್ನುವ ಸೂಚನೆಯನ್ನು ನೀಡಲಾಗಿದೆ. ಅಲ್ಲದೆ, ಪಾಸ್ ಅನ್ನು ಮತ್ತೆ ನವೀಕರಿಸುವುದಕ್ಕೂ ಅವಕಾಶ ಇರುವುದಿಲ್ಲ ಎಂದು ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರ ಮೂಲಕ ನಿರ್ದೇಶನ ನೀಡಲಾಗಿದೆ.
ಹೀಗಾಗಿ ಕರ್ನಾಟಕ – ಕೇರಳ ಸಂಚಾರವನ್ನು ಬಹುತೇಕ ಜುಲೈ 4ಕ್ಕೆ ನಿಲ್ಲಿಸಲು ರಾಜ್ಯ ಸರಕಾರ ಸೂಚನೆ ನೀಡಿದ್ದಾಗಿ ಕಾಣುತ್ತಿದೆ. ಬಹುತೇಕ ಜುಲೈ 4ರ ಬಳಿಕ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಆಗುತ್ತಾ ಅಥವಾ ಕೇರಳದಿಂದ ದೈನಂದಿನ ಉದ್ಯೋಗ ನಿಮಿತ್ತ ಬರುವವರನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳುತ್ತಾ ಅನ್ನುವ ಅನುಮಾನ ಕೇಳಿಬಂದಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ ಏಳರಿಂದ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಸರಕಾರ ಮುನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಕಾಸರಗೋಡು – ಮಂಗಳೂರು ಸಂಚಾರಕ್ಕೆ ಮತ್ತೆ ಬ್ರೇಕ್ ಹಾಕುವ ಸಾಧ್ಯತೆ ಕಂಡುಬಂದಿದೆ.