LATEST NEWS
ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿ ಪ್ರಖ್ಯಾತ ಆ್ಯಂಕರ್ ಕಂ ನಟಿ….!!
ಮಂಗಳೂರು ಸೆಪ್ಟೆಂಬರ್ 19: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುರತ್ಕಲ್ ಕಾನ ನಿವಾಸಿ ಅಕೀಲ್ ನೌಶೀಲ್ (28) ಹಾಗೂ ಕುಳಾಯಿ ನಿವಾಸಿ ಕಿಶೋರ್ ಅಮನ್ ಶೆಟ್ಟಿ(30) ಎಂದು ಗುರುತಿಸಲಾಗಿದೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಮಂಗಳೂರು ಸಿಸಿಬಿ ಪೋಲಿಸರು, ಇಕಾನಾಮಿಕ್ &ನಾರ್ಕೋಟಿಕ್ ಠಾಣೆಯ ಪೊಲೀಸರ ಕಾರ್ಯಾಚರಣೆ ನಡೆಸಿ ಡ್ಯಾನ್ಸರ್ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ಬೆಳಗ್ಗಿನ ಜಾವ ಮಂಗಳೂರು ನಗರದ ಕದ್ರಿ ಪದವು ಪರಿಸರದಲ್ಲಿ ಆರೋಪಿಗಳ ಬಂಧನವಾಗಿದೆ ಎಂದರು.
ಆರೋಪಿಗಳಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇಬ್ಬರ ಮೇಲೆ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಿಸಿದ್ದಾರೆ.
ಖ್ಯಾತ ಡ್ಯಾನ್ಸರ್ ಆಗಿರುವ ಕಿಶೋರ್ ಶೆಟ್ಟಿ, ಹಿಂದಿಯ ಎಬಿಸಿಡಿ ಸಿನಿಮಾದಲ್ಲಿ ನಟಿಸಿದ್ದ. ಈತ ಬಹಳ ಮಂದಿ ಹುಡುಗಿಯರಿಗೆ ಡ್ರಗ್ಸ್ ಕೊಟ್ಟು ಪಾರ್ಟಿ ಮಾಡಿದ್ದ ಎಂದು ಹೇಳಲಾಗಿದ್ದು. ಇತ್ತೀಚೆಗಷ್ಟೆ ಮಂಗಳೂರಿನಲ್ಲಿ ಒಂದು ಡ್ರಗ್ ಪಾರ್ಟಿ ಕೂಡ ಆಯೋಜಿಸಿದ್ದ. ಈ ಪಾರ್ಟಿಯಲ್ಲಿ ನಟಿ ಕಂ ಆಂಕರ್ ಭಾಗವಹಿದ್ದರು ಎಂದು ತಿಳಿದು ಬಂದಿದೆ.