KARNATAKA
ಉಳ್ಳಾಲ ನೇತ್ರಾವತಿ ಸೇತುವೆ ಯಲ್ಲಿ ಅನಾಥ ಕಾರು ಪತ್ತೆ, ಚಿಕ್ಕಮಗಳೂರಿನ ವ್ಯಕ್ತಿ ಆತ್ಮಹತ್ಯೆ ಶಂಕೆ..!
ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರೊಂದು ಪತ್ತೆಯಾಗಿದ್ದು, ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಕಾರನ್ನು ಪರಿಶೀಲಿಸಿದಾಗ ಚಿಕ್ಕಮಗಳೂರು ಜಿಲ್ಲೆಯ ವ್ಯಕ್ತಿಯೊಬ್ಬರ ಕೆಲವು ಗುರುತಿನ ಕಾರ್ಡ್‌ಗಳು ಕಂಡು ಬಂದಿವೆ.
ಚಿಕ್ಕಮಗಳೂರಿನ ಮುಗುಳಬಳ್ಳಿಗೋಕುಲ್ ಫಾರ್ಮ್ ನಿವಾಸಿ ಬಿ.ಎಸ್ ಶಂಕರಗೌಡ ಎಂಬವರ ಪುತ್ರ ಪ್ರಸನ್ನ (37) ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ .
ಸೋಮವಾರ ಮಧ್ಯಾಹ್ನ ವೇಳೆ ತೊಕ್ಕೊಟ್ಟು ಕಡೆಯಿಂದ ಬಂದು ರಾ.ಹೆ.66 ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಘಟನೆಯನ್ನು ಪ್ರತ್ಯಕ್ಷ ಕಂಡವರು ತಕ್ಷಣ ರಕ್ಷಣೆಗೆ ಓಡಿದರೂ ಅದಾಗಲೇ ನೀರುಪಾಲಾಗಿದ್ದರು ಎಂದು ಹೇಳಲಾಗಿದೆ ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಡಚಣೆಯುಂಟಾಯಿತು.
ಮನೆ ಮಂದಿ ಬಂದ ಬಳಿಕ ವಾಸ್ತವಾಂಶ ತಿಳಿಯಬಹುದಾಗಿದೆ ಎಂದು ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ನೇತ್ರಾವತಿ ಸೂಸೈಡ್ ಬ್ರಿಜ್ :
2019 ರಲ್ಲಿ ಕೆಫೆ ಡೇ ಮಾಲೀಕ ಸಿದ್ದಾಥ್೯ ಆತ್ಮಹತ್ಯೆ ನಂತರ ಸರಣಿ ಆತ್ಮಹತ್ಯೆಗಳೇ ಈ ನೇತ್ರಾವತಿ ಸೇತುವೆಯಲ್ಲಿ ನಡೆದಿವೆ. ಆದ್ದರಿಂದ ಇದನ್ನು ಸೂಸೈಡ್ ಬ್ರಿಜ್ ಎಂದೇ ಕುಖ್ಯಾತಿ ಪಡೆದಿತ್ತು. 2020 ರಲ್ಲಿ ಆತ್ಮಹತ್ಯೆ ತಡೆಗಾಗಿ ಮುಡಾ ಅಭಿವೃದ್ಧಿ ಅನುದಾನದ ಮೂಲಕ ತಡೆಬೇಲಿ ಅಳವಡಿಸಲಾಯಿತು. ತದನಂತರ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆಗಳು ನಿಂತಿತ್ತು.