LATEST NEWS
ನಿರ್ಬಂಧಕಾಜ್ಞೆ ನಡುವೆಯೂ ನಡೆದ ಮಂಗಳೂರು ಚಲೋ

ಮಂಗಳೂರು ಸೆಪ್ಟೆಂಬರ್ 7: ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ರಾಲಿ ಕಾರ್ಯಕ್ರಮ ಪೋಲೀಸರ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕಾಟ-ತಳ್ಳಾಟಕ್ಕೂ ವೇದಿಕೆಯಾಗಿತ್ತು. ನಗರದ ಜ್ಯೋತಿ ವೃತ್ತದ ಬಳಿ ಪ್ರತಿಭಟನಾ ಸಭೆ ನಡೆಸಿದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಬಳಿಕ ಅಲ್ಲಿಂದ ಬೈಕ್ ರಾಲಿಯ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಬೈಕ್ ರಾಲಿ ಹಾಗೂ ಸಮಾವೇಶಕ್ಕೆ ಅವಕಾಶ ನಿರಾಕರಿಸಿದರ ನಡುವೆಯೇ ಬಿಜೆಪಿ ಎರಡನ್ನೂ ಮಾಡುವ ಮೂಲಕ ತನ್ನ ಪ್ರತಿಷ್ಟೆಯನ್ನು ಉಳಿಸಿಕೊಂಡಿರುವ ಖುಷಿಯಲ್ಲಿದೆ.
ಜ್ಯೋತಿ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆ
ಪಿಎಫ್ಐ ಸಂಘಟನೆಯನ್ನು ನಿಶೇಧಿಸಬೇಕು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಯವರ ರಾಜೀನಾಮೆಯನ್ನು ಒತ್ತಾಯಿಸಿ ಇಂದು ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ಮಂಗಳೂರು ಚಲೋ ಬೈಕ್ ರಾಲಿಯನ್ನು ಆಯೋಜಿಸಿತ್ತು. ಇದಕ್ಕೆ ಮಂಗಳೂರು ಪೋಲೀಸ್ ಕಮಿಷನರ್ ಅನುಮತಿಯನ್ನು ನಿರಾಕರಿಸಿದ್ದರೂ ಇಂದು ಬೆಳಿಗ್ಗೆ 11 ಗಂಟೆಗೆ ನಗರದ ಜ್ಯೋತಿ ವೃತ್ತದ ಬಳಿ ಸೇರಿದ ಯುವಮೋರ್ಚಾ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಸಭೆಯನ್ನೂ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಆಶೋಕ್ , ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಪ್ರತಿಭಟನ ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಪೋಲೀಸರು ಬಂಧಿಸಿದ ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಸುನಿಲ್ ಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರು ಬೈಕ್ ರಾಲಿಯ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೋಲೀಸರು ಮಧ್ಯೆ ಪ್ರವೇಶಿಸಿ ಕಾರ್ಯಕರ್ತರನ್ನು ತಡೆದು ಬಂಧಿಸಿದ್ದಾರೆ.

ಪೊಲೀಸರಿಂದ ಹಲ್ಲೆ
ಈ ನಡುವೆ ಕಾರ್ಯಕರ್ತರನ್ನು ಪೋಲೀಸರು ಬಂಧಿಸುವ ಸಂದರ್ಭದಲ್ಲಿ ಪೋಲೀಸನೋರ್ವ ಕಾರ್ಯಕರ್ತನ ತಲೆಗೆ ಲಾಠಿಯಿಂದ ಹೊಡೆದ ಪರಿಣಾಮ ಕಾರ್ಯಕರ್ತನ ತಲೆಗೆ ಏಟಾಗಿದ್ದು, ಇದರಿಂದ ಕೆರಳಿದ ಪ್ರತಿಭಟನಾನಿರತರು ಪೋಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಪೋಲೀಸರ ಹಾಗೂ ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ಬಳಿಕ ಮಧ್ಯೆ ಪ್ರವೇಶಿಸಿದ ಹಿರಿಯ ಪೋಲೀಸ್ ಅಧಿಕಾರಿಗಳನ್ನು ಸಮಾಧಾನಪಡಿಸಿದ್ದಾರೆ. ಮಹಿಳಾ ಪ್ರತಿಭಟನಾನಿರತೆಯನ್ನೂ ಎಳೆದಾಡಿದ ಮಹಿಳಾ ಪೋಲೀಸರನ್ನೂ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪೋಲೀಸ್ ಅನುಮತಿಯ ನಿರಾಕರಣೆಯ ಮಧ್ಯೆಯೂ ಬಿಜೆಪಿ ಕಾರ್ಯಕರ್ತರು ಬೈಕ್ ರಾಲಿ ಹಾಗೂ ಪ್ರತಿಭಟನೆಯನ್ನು ನಡೆಸುವ ಮೂಲಕ ಸರಕಾರಕ್ಕೆ ಸಡ್ಡು ಹೊಡೆದಿದ್ದಾರೆ. ಪ್ರತಿಭಟನೆ ಇಂದಿಗೇ ಮುಗಿಯದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಬಿಜೆಪಿ ನೀಡಿದೆ.
VIDEO