LATEST NEWS
ಮಂಗಳೂರು ಕಾರ್ ಸ್ಟ್ರೀಟ್ ಶೂಟೌಟ್ ಪ್ರಕರಣ : ರವಿ ಪೂಜಾರಿ ಕೈವಾಡ ಶಂಕೆ
ಮಂಗಳೂರು ಕಾರ್ ಸ್ಟ್ರೀಟ್ ಶೂಟೌಟ್ ಪ್ರಕರಣ : ರವಿ ಪೂಜಾರಿ ಕೈವಾಡ ಶಂಕೆ
ಮಂಗಳೂರು,ಡಿಸೆಂಬರ್ 09 : ಮಂಗಳೂರಿನ ಕಾರ್ ಸ್ಟ್ರೀಟ್ ಬಟ್ಟೆ ಅಂಗಡಿಯ ಮೆಲೆ ನಿನ್ನೆ ರಾತ್ರಿ ನಡೆದ ಶೂಟೌಟ್ ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿ ಅವರ ಹೆಸರು ಕೇಳಿ ಬರುತ್ತಿದೆ.
ರಥ ಬೀದಿಯ ಎಂ .ಸಂಜೀವಶೆಟ್ಟಿ ಸಿಲ್ಕ್ ಅಂಡ್ ಸಾರೀಸ್ ಬಟ್ಟೆ ಅಂಗಡಿಯಲ್ಲಿ ನಿನ್ನೆ ರಾತ್ರಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು.
ಘಟನೆಯಲ್ಲಿ ಬಟ್ಟೆ ಅಂಗಡಿ ನೌಕರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನಾ ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಕೈ ಗೊಂಡಿದ್ದಾರೆ.
ಹಫ್ತಾಕ್ಕಾಗಿ ಈ ಶೂಟೌಟ್ ಭೂಗತ ಪಾತಕಿಗಳು ನಡೆಸಿದ್ದಾರೆ ಎಂದು ಪೋಲಿಸ್ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಭೂಗತ ದೊರೆ ರವಿ ಪೂಜಾರಿ ಅವರ ಹೆಸರು ಇದೀಗ ಕೇಳಿ ಬರುತ್ತಿದೆ.
ಮೂಲಗಳ ಪ್ರಕಾರ ಕಳೆದ ಅನೇಕ ಸಮಯದಿಂದ ಸಂಜೀವ ಶೆಟ್ಟಿ ಬಟ್ಟೆ ಅಂಗಡಿ ಮಾಲಕರಿಗೆ ಭೂಗತ ದೊರೆಯಿಂದ ಹಫ್ತಾದ ಬೇಡಿಕೆಯನ್ನಿಟ್ಟು ನಿರಂತರವಾಗಿ ಕರೆಗಳು ಬರುತ್ತಿದ್ದುವು ಎಂದು ಖಚಿತ ಮೂಲಗಳಿಂದ ಸ್ಪಷ್ಟವಾಗಿದೆ.
ಕಳೆದ ಬಾರಿ ಸಂಜೀವ ಶೆಟ್ಟಿ ಬಟ್ಟೆ ಅಂಗಡಿಯ ಪುತ್ತೂರು ಬ್ರಾಂಚ್ ತೆರೆದಾಗಲೂ ಈ ಹಫ್ತಾದ ಬೇಡಿಕೆಯನ್ನು ಮುಂದಿಟ್ಟು ಕರೆಗಳು ಬಂದಿದ್ದುವು,
ಮಂಗಳೂರಿನ ರಥ ಬೀದಿಯಲ್ಲಿ ಇನ್ನೊಂದು ಮಳಿಗೆ ಆರಂಭಿಸಿದಾಗಲೂ ಹಣಕ್ಕಾಗಿ ಬೇಡಿಕೆ ಇಟ್ಟು ಕರೆಗಳು ಬಂದಿದ್ದುವು.
ನಿನ್ನೆ ದಾಳಿಯ ನಡೆಯುವ 10 ನಿಮಿಷಗಳ ಮೊದಲು ಕೂಡ ಹಣದ ಬೇಡಿಕೆಯನ್ನು ಮುಂದಿಟ್ಟು, ಭೂಗತ ದೊರೆ ಅಂಗಡಿ ಮಾಲಕರಿಗೆ ಬೆದರಿಕೆಯ ಕರೆ ಮಾಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ ಇದಕ್ಕೆ ಯಾವುದೇ ಸ್ಪಂದನೆ ನೀಡದ ಅಂಗಡಿ ಮಾಲಕರಿಗೆ ಇದೀಗ ಈ ರೀತಿಯ ಶೂಟೌಟ್ ನಡೆಸಿ ಬೆದರಿಸಿ ಹಣ ಕೀಳುವ ತಂತ್ರ ಅನುಸರಿಸಲಾಗಿದೆ.
ನಡೆದುಕೊಂಡೇ ಬಂದ ದುಷ್ಕರ್ಮಿಗಳು:
ಮಂಗಳೂರಿನ ರಥ ಬೀದಿಯ ಎಂ. ಸಂಜೀವ ಶೆಟ್ಟಿ ಸಿಲ್ಕ್ ಅಂಡ್ ಸಾರೀಸ್ ಬಟ್ಟೆ ಅಂಗಡಿಗೆ ನಿನ್ನೆ ರಾತ್ರಿ ದುಷ್ಕರ್ಮಿಗಳು ನಡೆದುಕೊಂಡೇ ಬಂದದ್ದು ಇದೀಗ ಬಯಲಾಗಿದೆ.
ನಿನ್ನೆ ರಾತ್ರಿ ಸುಮಾರು 8.30 ಕ್ಕೆ ಇಬ್ಬರು ದುಷ್ಕರ್ಮಿಗಳು ಗಿರಾಕಿಗಳ ಸೋಗಿನಲ್ಲಿ ಅಂಗಡಿಗೆ ಬಂದಿದ್ದಾರೆ. ಆಗ ಅಂಗಡಿಯನ್ನು ಮುಚ್ಚುವ ಕಾರ್ಯದಲ್ಲಿ ಸಿಬಂದಿಗಳು ನಿರತರಾಗಿದ್ದರು.
ಈ ಸಂದರ್ಭದಲ್ಲಿ ಅಂಗಡಿ ಒಳಗೆ ಬಂದ ಇಬ್ಬರಲ್ಲಿ ಒಬ್ಬ ಬಟ್ಟೆಗಳು ಬೇಕೆಂದು ವಿಚಾರಿಸಿದ್ದಾನೆ.
ಆಗ ಅಂಗಡಿ ಸಿಬಂದಿಗಳು ಈಗ ಅಂಗಡಿ ಮುಚ್ಚುವ ಸಮಯ ಇವತ್ತು ಆಗುವುದಿಲ್ಲ. ನಾಳೆ ಬನ್ನಿ ಎಂದು ಉತ್ತರಿಸಿದ್ದಾರೆ.
ಆ ಸಂದರ್ಭದಲ್ಲಿ ಹೊರ ಹೋಗುತ್ತಿದ್ದಂತೆ ದುಷ್ಕರ್ಮಿಗಳು ಬಟ್ಟೆ ಅಂಗಡಿ ಸಿಬಂದಿ ಮಹಾಲಿಂಗ ಅವರ ಕಾಲಿಗೆ ಶೂಟ್ ಮಾಡಿ ಪರಾರಿಯಾಗಿದ್ದಾರೆ.
ಮಂಗಳೂರಿನಲ್ಲಿ ಇದುವರೆಗೆ ಬೈಕುಗಳಲ್ಲಿ ಬಂದು ಶೂಟೌಟ್ ಮಾಡಿ ಬೆದರಿಸಿ ಹೋಗುವ ದುಷ್ಕರ್ಮಿಗಳು ಈ ಬಾರಿ ನಡೆದುಕೊಂಡೆ ಬಂದು ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
ಕಿನ್ನಿಗೋಳಿಯ ಜ್ಯುವೆಲ್ಲರಿ ಶಾಪಿಗೂ ಗುಂಡು :
ಮಂಗಳೂರು ಪೋಲಿಸ್ ಕಮಿಶನರೇಟ್ ವ್ಯಾಪ್ತಿಯ ಕಿನ್ನಿಗೋಳಿ ಪೇಟೆಯ ರಾಜಶ್ರೀ ಜುವೆಲ್ಲರ್ಸ್ ಗೂ ದುಷ್ಕರ್ಮಿಗಳು ಗುಂಡು ಹಾಕಿದ್ದಾರೆ ಎಂದು ವರದಿಯಾಗಿದೆ.
ಕಿನ್ನಿಗೋಳಿಯ ರಾಜಶ್ರೀ ಜುವೆಲ್ಲರ್ಸ್ ಗೆ ಎರಡು ದಿನಗಳ ಹಿಂದೆ ರಾತ್ರಿ ಬೈಕಿನಲ್ಲಿ ಇಬ್ಬರು ದುಷ್ಕರ್ಮಿಗಳು ಆಗಮಿಸಿ ಸಜೀವ ಗುಂಡನ್ನು (Bullet ) ಕವರಿನಲ್ಲಿ ಹಾಕಿ ಜುವಲ್ಲರಿ ಮಾಲಕನ ಕೌಂಟರಿನಲ್ಲಿಟ್ಟು ಪರಾರಿಯಾಗಿದ್ದಾರೆ.
ಕೆಲ ನಿಮಿಷಗಳ ಬಳಿಕ ಭೂಗತ ದೊರೆ ರವಿ ಪೂಜಾರಿ ಬಲಗೈ ಬಂಟ ಕಲಿ ಯೋಗಿಶ್ ರಾಜಶ್ರೀ ಜುವೆಲರ್ಸ್ ಮಾಲಿಕನಿಗೆ ಕರೆ ಮಾಡಿದ್ದಾನೆ.ಇವತ್ತು ಈ ಬುಲೆಟ್ ನಿನಗೆ ಕವರಿನಲ್ಲಿ ಹಾಕಿ ಕಳಿಸಿದ್ದೇನೆ.
ಮುಂದಿನ ಬಾರಿ ನೇರವಾಗಿ ರಿವಲ್ವಾರಿನಿಂದ ಬರುತ್ತೆ ಹುಷಾರ್ ಎಂದು ಬೆದರಿಸಿ ಕರೆ ಕಟ್ ಮಾಡಿದ್ದಾನೆ.
ಈ ಬಗ್ಗೆ ಪೋಲಿಸ್ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಭೂಗತ ಚಟುವಟಿಕೆಗಳು ಹೆಚ್ಚಾಗುತ್ತಿವೆ.
ಈ ಹಿಂದೆ ಭೂಗತ ದೊರೆಗಳು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಬೆದರಿಸಿ ಹಣ ಕೀಳುತ್ತಿದ್ದರು.
ಆದರೆ ರಿಯಲ್ ಎಸ್ಟೇಟ್ ಉದ್ಯಮ ನೆಲಕ್ಕಚ್ಚಿದ ಪರಿಣಾಮ ಭೂಗತ ಪಾತಕಿಗಳು ಇತರ ಉದ್ಯಮಗಳತ್ತ ಕಣ್ಣು ಹಾಯಿಸಿದ್ದಾರೆ.
ವಿಡಿಯೋ..