LATEST NEWS
ರಾಜ್ಯದಲ್ಲಿ ಇನ್ನು ಮುಂದೆ ಮೇಡ್ ಇನ್ ಮಲೇಷ್ಯಾದ ಮರಳು
ರಾಜ್ಯದಲ್ಲಿ ಇನ್ನು ಮುಂದೆ ಮೇಡ್ ಇನ್ ಮಲೇಷ್ಯಾದ ಮರಳು
ಮಂಗಳೂರು,ಡಿಸೆಂಬರ್ 09 : ಮಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದೆಲ್ಲೆಡೆ ಇನ್ನು ಮುಂದೆ ವಿದೇಶಿ ಮರಳು ಲಗ್ಗೆ ಇಡಲಿದೆ.
ಅನೇಕ ಕಡೆ ಮೇಡ್ ಇನ್ ಮಲೇಷ್ಯಾ ದ ಮರಳು ಕಾಣ ಸಿಗಲಿದೆ.
ರಾಜ್ಯದಲ್ಲಿ ಮರಳಿನ ತೀವೃ ಅಭಾವ ಸೃಷ್ಟಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನಿಸಿರುವಂತೆ ಇದೇ ಮೊದಲ ಬಾರಿಗೆ 52,129 ಮೆಟ್ರಿಕ್ ಟನ್‌ಗಳಷ್ಟು ಭಾರೀ ಪ್ರಮಾಣದ ಮಲೇಷೀಯ್ಯಾ ಮರಳು ಮಂಗಳೂರಿನ ನವಮಂಗಳೂರ ಬಂದರಿಗೆ ಬಂದು ತಲುಪಿದೆ.
ಮಲೇಷ್ಯಾದ ಪಿಕೋನ್ ಬಂದರಿನಿಂದ “ತೋರ್ ಇನ್ಫಿನಿಟ್’ ಹೆಸರಿನ ಸರಕು ನೌಕೆ ಈ ಮರಳನ್ನು ತುಂಬಿಸಿಕೊಂಡು ನವಮಂಗಳೂರು ಬಂದರನ್ನು ತಲುಪಿದೆ.
ಹಡಗಿನಿಂದ ಮರಳನ್ನು ಅನ್‌ಲೋಡ್ ಮಾಡುವ ಕಾರ್ಯ ಕೂಡ ಪ್ರಾರಂಭವಾಗಿದೆ.
ಹಡಗಿನಿಂದ ಸಂಪೂರ್ಣ ಮರಳನ್ನು ಅನ್ ಲೋಡ್ ಮಾಡಿದ ಬಳಿಕ ಸರ್ಕಾರದ ನೀತಿ ನಿಯಮಗಳ ಅಡಿಯಲ್ಲಿ ಮರಳನ್ನು 14 ಗಾಲಿಗಳ, 21 ಟನ್ ಹೊರುವ ಸಾಮರ್ಥ್ಯ ಹೊಂದಿರುವ ಬೃಹತ್ ಲಾರಿಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಗೆ ರಸ್ತೆ ಮೂಲಕ ರವಾನಿಸಲಾಗುತ್ತದೆ.
ಒಟ್ಟು 2,500 ಲಾರಿಗಳಷ್ಟು ಮರಳು ಇರಬಹುದೆಂದು ಅಂದಾಜಿಸಲಾಗಿದೆ.
ಮರಳು ಆಮದಿಗೆ ಧೃಡ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರ :
ರಾಜ್ಯದಲ್ಲಿ ತೀವೃವಾಗಿ ಕಾಡುತ್ತಿರುವ ಮರಳಿನ ಕೊರತೆ ನೀಗಿಸಲು ಸರ್ಕಾರ ಧೃಡ ನಿರ್ಧಾರ ಕೈಗೊಂಡಿತ್ತು
. ರಾಜ್ಯದ ಮರಳು ಅಭಾವ ನೀಗಿಸಲು ರಾಜ್ಯ ಸರ್ಕಾರ ಎರಡು ತಿಂಗಳ ಹಿಂದಷ್ಟೇ ಮಲೇಷ್ಯಾದಿಂದ ಮರಳು ತರಿಸಿಕೊಳ್ಳಲು ನಿರ್ಧರಿಸಿತ್ತು.
ಆ ಬಳಿಕ ಪ್ರಕ್ರಿಯೆಗಳು ಶುರುವಾಗಿ ಮಂಗಳೂರು ಬಂದರು ಮೂಲಕ ಮಲೇಷ್ಯಾದಿಂದ 5 ಲಕ್ಷ ಮೆಟ್ರಿಕ್ ಟನ್ ಮರಳನ್ನು ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿತ್ತು.
ಚೆನ್ನೈ ಮೂಲದ ಆಕಾರ್ ಎಂಟರ್‌ಪ್ರೈಸಸ್ ಎಂಬ ಕಂಪನಿಯ ಮೂಲಕ ಮಲೇಷ್ಯಾದಿಂದ ಮೊದಲ ಹಂತದಲ್ಲಿ 52,129 ಮೆ. ಟನ್ ಮರಳು ನವಮಂಗಳೂರು ಬಂದರಿಗೆ ರವಾನೆಯಾಗಿದೆ.
ವಿದೇಶದಿಂದ ಆಮದಾದ ಮರಳನ್ನು ರಾಜ್ಯದಲ್ಲಿ ಮಾರಾಟ ಮಾಡಲು ರಾಜ್ಯ ಸರ್ಕಾರ ಮೈಸೂರ್ ಸೇಲ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಗೆ ಮತ್ತು ಆಕಾರ್ ಕಂಪನಿಗೆ ಅನುಮತಿ ನೀಡಿದೆ.
ಸದ್ಯ ರಾಜ್ಯದಲ್ಲಿ ವಾರ್ಷಿಕ 90 ಲಕ್ಷ ಟನ್ ಮರಳು ಬಳಕೆಗೆ ಲಭ್ಯವಿದೆ.
ಆದರೆ ವರ್ಷಕ್ಕೆ ಸುಮಾರು 3.5 ಕೋಟಿ ಮೆಟ್ರಿಕ್ ಟನ್ ಮರಳಿನ ಬೇಡಿಕೆ ಇದೆ. ಹೀಗಾಗಿ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರಿ ವ್ಯತ್ಯಾಸವಿರುವುದರಿಂದ ರಾಜ್ಯ ಸರ್ಕಾರ ಅನಿವಾರ್ಯವಾಗಿ ವಿದೇಶಿ ಮರಳಿನ ಮೊರೆ ಹೋಗಿದೆ.
You must be logged in to post a comment Login