LATEST NEWS
ಸುಮಲತಾ ಮಂಡ್ಯದಿಂದ ಕಣಕ್ಕೆ: ನಿಖಿಲ್ ಸುಗಮ ಗೆಲುವಿಗೆ ಜೆಡಿಎಸ್ ರಣತಂತ್ರ
ಸುಮಲತಾ ಮಂಡ್ಯದಿಂದ ಕಣಕ್ಕೆ: ನಿಖಿಲ್ ಸುಗಮ ಗೆಲುವಿಗೆ ಜೆಡಿಎಸ್ ರಣತಂತ್ರ
ಬೆಂಗಳೂರು, ಫೆಬ್ರವರಿ 04 : ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್ ಪತ್ನಿ ಸುಮಲತಾ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುತ್ತೇನೆಂದು ಖ್ಯಾತ ನಟ ದರ್ಶನ್ ಹೇಳಿದ್ದಾರೆ.
ದರ್ಶನ್ ನ ಈ ಹೇಳಿಕೆ ಭಾರಿ ಕುತೂಹಲಕ್ಕೆ ಎಡೆ ಮಾಡಿದೆ. ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬರೀಷ್ ಅಭಿಮಾನಿಗಳ ಮಾತಿಗೆ ಮನಸೋತಿರುವ ಸುಮಲತಾ ಅವರು ತಾನು ಸ್ಪರ್ಧಿಸುವುದಾದರೆ ಮಂಡ್ಯದಿಂದ ಮಾತ್ರ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ದರ್ಶನ್ ನೀಡಿದ ಹೇಳಿಕೆ ಭಾರಿ ವೈರಲ್ ಆಗಿದ್ದು, ಚಿತ್ರರಂಗದ ಹಲವು ಗಣ್ಯರು, ದಿಗ್ಗಜರು ಈಗಾಗಲೇ ಸುಮಲತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಂಬರೀಷ್ ಕುಟುಂಬದ ಜೊತೆ ಆಪ್ತ ಒಡನಾಟ ಹೊಂದಿರುವ ದರ್ಶನ್ ಪ್ರಚಾರದ ಸಂಪೂರ್ಣ ಜವಾಬ್ದಾರಿ ಹೊತ್ತು ಜಿಲ್ಲೆಯಾದ್ಯಂತ ಕೆಲಸ ಮಾಡಲಿದ್ದಾರೆ. ಸುತ್ತೂರು ಜಾತ್ರೆಗೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ದರ್ಶನ್ ಈ ವಿಚಾರವನ್ನೂ ತಿಳಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸುಮಲತಾ ಅವರಿಗೆ ಮೊದಲಿನಿಂದಲೂ ರಾಜಕಾರಣದ ಮೇಲೆ ಆಸಕ್ತಿ ಇದೆ. ಅಂಬರೀಷ್ ರಾಜಕಾರಣದಲ್ಲಿ ಬಹುಕಾಲ ಉಳಿಯಲು ಅವರೇ ಮುಖ್ಯ ಕಾರಣ. ದರ್ಶನ್ ಸೇರಿ ಚಿತ್ರರಂಗದ ಹಲವರು ಅವರ ಹಿಂದೆ ನಿಂತಿದ್ದಾರೆ. ಮಂಡ್ಯ ಜನರ ಒತ್ತಾಯಕ್ಕೆ ಮಣಿದಿರುವ ಅವರು ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದಾರೆ. ಫೆ. 11ರಂದು ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ತಿಳಿಸಲಿದೆ ಎಂದು ಮಂಡ್ಯದ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಸೋಲಿನ ನಂತರ ರಮ್ಯಾ ಕ್ಷೇತ್ರ ತ್ಯಜಿಸಿದರು. ವಿಧಾನಸಭಾ ಚುನಾವಣೆ ವೇಳೆ ಅಂಬರೀಷ್ ರಾಜಕಾರಣದಿಂದ ಹಿಂದೆ ಸರಿದರು. ಹೀಗಾಗಿ ಸಕ್ಕರೆ ನಾಡಿನ ರಾಜಕಾರಣ ತಾರಾ ವರ್ಚಸ್ಸು ಕಳೆದುಕೊಂಡಿತ್ತು. ಈಗ ಮತ್ತೆ ಸುಮಲತಾ ಹಾಗೂ ದರ್ಶನ್ ಮೂಲಕ ತಾರೆಗಳ ಆಕರ್ಷಣೆ ಪಡೆಯುತ್ತಿದ್ದು, ಜನರಲ್ಲಿ ಕುತೂಹಲ ಮನೆ ಮಾಡಿದೆ. ಆದರೆ ಸುಮಲತಾ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಸುಲಭದ ಹಾದಿಯಲ್ಲ. ಕ್ಷೇತ್ರವು ದಳಪತಿಗಳ ಭದ್ರಕೋಟೆಯಾಗಿದ್ದು, ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ತುದಿಗಾಲ ಮೇಲೆ ನಿಂತಿದೆ. ನಿಖಿಲ್ ಸಣ್ಣಪುಟ್ಟ ಕಾರ್ಯಕ್ರಮಗಳಿಗೂ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಪೂರ್ವ ತಯಾರಿ ಎಂಬಂತೆ ನಿಖಿಲ್ ಅಭಿನಯದ ‘ಸೀತಾರಾಮ ಕಲ್ಯಾಣ’ ಚಲನಚಿತ್ರ ವೀಕ್ಷಣೆಗೆ ಜಿಲ್ಲೆಯ ಜೆಡಿಎಸ್ ಶಾಸಕರು ಜನರಿಗೆ ಉಚಿತವಾಗಿ ಟಿಕೆಟ್ ಹಂಚುತ್ತಿದ್ದಾರೆ. ಪ್ರಾಯೋಜಿತ ಪ್ರದರ್ಶನ ಕೂಡ ಏರ್ಪಡಿಸಿದ್ದಾರೆ.ಚಿತ್ರದಲ್ಲಿ ನಿಖಿಲ್, ರೈತರ ಆತ್ಮಹತ್ಯೆ ತಡೆಯುವ ದೃಶ್ಯ ಕಂಡು ಜನ ಶಿಳ್ಳೆ ಹಾಕುತ್ತಿದ್ದಾರೆ. ಅವರು ಪಂಚೆಯುಟ್ಟು ಬರುವ ದೃಶ್ಯಗಳಲ್ಲಿ, ಮುಂದಿನ ಸಂಸದ ನಿಖಿಲ್ ಎಂದು ಜೈಕಾರ ಹಾಕುತ್ತಿದ್ದಾರೆ. ನಿಖಿಲ್ ಅವರನ್ನು ಜಿಲ್ಲೆಯ ಮನೆ, ಮನಗಳಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಈ ಎಲ್ಲಾ ವಿದ್ಯಮಾನಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಲೋಕಸಭಾ ಸ್ಥಾನ ಬಿಟ್ಟುಕೊಡುವುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಸೋತು ಸುಣ್ಣವಾಗಿರುವ ಕಾಂಗ್ರೆಸ್ ಮುಖಂಡರು ಜಿಲ್ಲೆಯಲ್ಲಿ ಮತ್ತೆ ಎದ್ದು ನಿಲ್ಲಲು ಸುಮಲತಾ ಎಂಬ ಅಸ್ತ್ರ ಹೂಡಿದ್ದಾರೆ. ಈ ಅಸ್ತ್ರ ಜೆಡಿಎಸ್ ಮುಖಂಡರಿಗೆ ನುಂಗಲಾಗದ ತುತ್ತಾಗಿರುವುದು ಮಾತ್ರ ಸುಳ್ಳಲ್ಲ.