LATEST NEWS
ಜೇಡ ಕಡಿದು ಕೈ ಕಳೆದುಕೊಂಡ ನತದೃಷ್ಟ
ಪ್ಯಾರೀಸ್, ಸೆಪ್ಟಂಬರ್ 05: ಮನೆಯಲ್ಲಿ, ಹೊಲದಲ್ಲಿ ಎಲ್ಲೆಂದರಲ್ಲಿ ಜೇಡ, ಜೇಡರ ಬಲೆಗಳನ್ನು ನೋಡಿರಬಹುದು. ಜೇಡ ಏನೂ ಮಾಡಲ್ಲ ಎಂದು ಜೇಡರ ತಂಟೆಗೆ ಹೋದಲ್ಲಿ ಜೀವನ ಪರ್ಯಂತ ನೋವು ಅನುಭವಿಸಬೇಕಾದ ಸಾಧ್ಯತೆಯೂ ಇದೆ. ಹೌದು ಇಂಥಹುದೊಂದು ಘಟನೆ ಪ್ಯಾರೀಸ್ ನ ಸೈಂಟ್ ನಿಕೋಲಸ್ ಡಿ ಪೋರ್ಟ್ ಎಂಬಲ್ಲಿ ಬೆಳಕಿಗೆ ಬಂದಿದೆ.
60 ವರ್ಷ ಪ್ರಾಯದ ಪ್ಯಾಟ್ರಿಕ್ ಜೆನೆಟ್ ಎನ್ನುವ ವ್ಯಕ್ತಿ ತನ್ನ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಕಂದು ಬಣ್ಣದ ಏಕಾಂಗಿ ಚೇಡವೊಂದು ಆತನ ಎಡಗೈ ಗೆ ಕಚ್ಚಿದೆ. ಜೇಡ ಕಚ್ಚಿರುವುದು ಎಂದು ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದ ಪ್ಯಾಟ್ರಿಕ್ ಮತ್ತೆ ನಿದ್ದೆಗೆ ಜಾರಿದ್ದಾರೆ. ಬೆಳಿಗ್ಗೆ ಎದ್ದ ಸಂದರ್ಭದಲ್ಲಿ ಜೇಡ ಕಚ್ಚಿದ ಕೈ ದಪ್ಪವಾಗಿ ಕೈ ಎತ್ತಲೂ ಆಗದ ಸ್ಥಿತಿಗೆ ತಲುಪಿತ್ತು. ಅಲ್ಲದೆ ವಿಪರೀತ ಸಿಡಿತವನ್ನು ಸಹಿಸಲಾಗದೆ ಪ್ಯಾಟ್ರಿಕ್ ಸ್ಥಳೀಯ ಕ್ಲೀನಿಕ್ ಒಂದಕ್ಕೆ ತನ್ನ ಕೈಯನ್ನು ತೋರಿಸಲು ಹೋಗಿದ್ದರು.
ಕೈಯನ್ನು ಪರಿಶೀಲಿಸಿದ ವೈದ್ಯರು ಆ್ಯಂಟಿ ಬಯೋಟಿಕ್ ಮಾತ್ರೆಗಳನ್ನು ಕೊಟ್ಟಿದ್ದರು. ಮಾತ್ರೆಗಳನ್ನು ತಿಂದರೂ ಕೈಯ ಪರಿಸ್ಥಿತಿ ಮಾತ್ರ ಹದಗೆಡಲಾರಂಭಿಸಿತ್ತು. ಮತ್ತೆ ವೈದ್ಯರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದರು. ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಬೇರೆ ದೊಡ್ಡ ಆಸ್ಪತ್ರೆಯಲ್ಲಿ ಕೈಯ ಸ್ಪೆಷಲಿಸ್ಟ್ ಬಳಿಯೇ ತೋರಿಸಬೇಕಾಗಬಹುದು ಎನ್ನುವ ಸಲಹೆಯನ್ನು ನೀಡಿದ್ದರು.
ಹತಾಶರಾದ ಪ್ಯಾಟ್ರಿಕ್ ಕೈಯ ಸರ್ಜರಿಗೆಂದೇ ಹೆಸರುವಾಸಿಯಾದ ನ್ಯಾಸ್ಸಿ ನಗರದ ಎಮಿಲಿ ಗಲ್ಲೆ ಆಸ್ಪತ್ರೆಗೆ ದಾಖಲಾದರು. ತಕ್ಷಣವೇ ಕೈಯ ಸರ್ಜರಿ ನಡೆಸಬೇಕೆಂದು ಸೂಚಿಸಿದ ಹಿನ್ನಲೆಯಲ್ಲಿ ಕೈ ಆಪರೇಶನ್ ನಡೆಸಲಾಗಿತ್ತು. ಅಲ್ಲದೆ ಕೈಯ ಚರ್ಮವೆಲ್ಲಾ ಸಂಪೂರ್ಣ ಹದಗೆಟ್ಟ ಕಾರಣ ಪ್ಯಾಟ್ರಿಕ್ ಅವರ ಹೊಟ್ಟೆ ಭಾಗದ ಚರ್ಮವನ್ನು ತೆಗೆದು ಕೈಗೆ ಕಸಿ ಮಾಡಲಾಗಿತ್ತು. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲೇ ಕಳೆಯಬೇಕಾದ ಪ್ಯಾಟ್ರಿಕ್ ಕೈಯನ್ನು ಸರಿಪಡಿಸಲಾಗಿಲ್ಲ. ಎಡಗೈಯು ಸಂಪೂರ್ಣ ನಿಯಂತ್ರಣವಿಲ್ಲದ ಸ್ಥಿತಿಗೆ ತಲುಪಿದೆ. ಚೇಡ ಒಂದು ವೇಳೆ ತನ್ನ ಮುಖದ ಭಾಗಕ್ಕೆ ಕಚ್ಚುತ್ತಿದ್ದರೆ ತಾನು ಜೀವಿಸುತ್ತಲೇ ಇರಲಿಲ್ಲ ಎನ್ನುವ ಪ್ಯಾಟ್ರಿಕ್ ಜೇಡ ಎನ್ನುವ ತಾತ್ಸಾರ ಭಾವನೆಯಿಂದ ಎಲ್ಲರೂ ದೂರವಿರುವಂತೆ ಮನವಿಯನ್ನೂ ಮಾಡುತ್ತಾರೆ.