LATEST NEWS
ಉಳ್ಳಾಲ – ಅಣ್ಣನ ಮಗಳನ್ನು ಸಮುದ್ರಅಲೆಗಳಿಂದ ರಕ್ಷಿಸುವ ವೇಳೆ ಸಮುದ್ರಪಾಲಾದ ವ್ಯಕ್ತಿ
ಮಂಗಳೂರು ಡಿಸೆಂಬರ್ 30: ಸಮುದ್ರ ಪಾಲಾಗುತ್ತಿದ್ದ ಅಣ್ಣನ ಮಗಳನ್ನು ರಕ್ಷಿಸುವ ವೇಳೆ ವ್ಯಕ್ತಿಯೊಬ್ಬ ಸಮುದ್ರದ ಅಲೆಗಳ ಹೊಡೆತಕ್ಕೆ ನೀರುಪಾಲಾದ ಘಟನೆ ಸೋಮೇಶ್ವರ ಉಚ್ಚಿಲದ ಪೆರಿಬೈಲು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಮೃತರನ್ನು ಬೆಂಗಳೂರಿನ ಶಿವಾಜಿ ನಗರದ ಶಿವಾಜಿ ರೋಡ್ ನಿವಾಸಿ ಕೆ.ಎಂ. ಸಜ್ಜದ್ ಆಲಿ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಸಜ್ಜದ್ ಅವರು ಸಂಬಂಧಿಕರ ಮದುವೆಗೆ ಮಂಗಳೂರಿಗೆ ಆಗಮಿಸಿದ್ದರು, ಮದುವೆ ಮುಗಿಸಿದ ಬಳಿಕ ಸಜ್ಜದ್ ಆಲಿರವರು ಕುಟಂಬಸ್ಥರೊಂದಿಗೆ ಮದ್ಯಾಹ್ನ ವೇಳೆಗೆ ಸೋಮೇಶ್ವರದ ಉಚ್ಚಿಲ ಪೆರಿಬೈಲು ಬೀಚಿಗೆ ಬಂದಿದ್ದರು. ಬೀಚ್ ನಲ್ಲಿ ಕುಟುಂಬಸ್ಥರು ನೀರಾಟವಾಡುತ್ತಿದ್ದಾಗ ಸಜ್ಜದ್ ಅವರ ಅಣ್ಣನವರ ಮಗಳು ಏಕಾಏಕಿ ಆಯತಪ್ಪಿ ಸಮುದ್ರದ ನೀರಿನ ಅಲೆಯಲ್ಲಿ ಕೊಚ್ಚಿಕೊಂಡು ಸ್ವಲ್ಪ ದೂರಕ್ಕೆ ಹೋಗಿದ್ದು ಪ್ರಾಣ ರಕ್ಷಣೆಗೆ ಬೊಬ್ಬಿಟ್ಟಿದ್ದಾಳೆ. ಕೂಡಲೇ ಸಜ್ಜದ್ ಅಲಿಯವರು ಸಮುದ್ರಕ್ಕೆ ಧುಮುಕಿ ಆಸಿಯಾಳನ್ನು ಎಳೆದು ತಂದು ದಡಕ್ಕೆ ಹಾಕಿದ್ದಾರೆ. ಅದೇ ಸಂದರ್ಭ ತೀರಕ್ಕೆ ಅಪ್ಪಳಿಸಿದ ದೈತ್ಯಾಕಾರದ ಮತ್ತೊಂದು ಅಲೆಯೊಂದು ಸಜ್ಜದ್ ಅವರನ್ನು ಸಮುದ್ರದತ್ತ ಸೆಳೆದುಕೊಂಡಿದೆ. ಗಂಭೀರ ಸ್ಥಿತಿಯಲ್ಲಿದ್ದ ಸಜ್ಜದ್ ಅವರನ್ನ ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅಷ್ಟರಲ್ಲಿ ಅವರು ಸಾವನಪ್ಪಿದ್ದಾರೆ.