LATEST NEWS
ಯುವಕನ ಸಾವಿಗೆ ಕಾರಣವಾದ ಉಗ್ರ ಸಂಘಟನೆ ಯಾವುದು ?
ಯುವಕನ ಸಾವಿಗೆ ಕಾರಣವಾದ ಉಗ್ರ ಸಂಘಟನೆ ಯಾವುದು ?
ಉಡುಪಿ ಅಕ್ಟೋಬರ್ 17: ತನ್ನ ಸಾವಿಗೆ ಉಗ್ರ ಸಂಘಟನೆಯೇ ಕಾರಣ ಅನ್ನೋ ಡೆತ್ ನೋಟ್ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕುಂದಾಪುರ ಮಾರ್ಕೋಡು ಬಬ್ಬರಿಮಕ್ಕಿಯಲ್ಲಿ 23 ವರ್ಷದ ವಿವೇಕ್ ನೇಣಿಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಈತ ರಿಲಯನ್ಸ್ ಫೌಂಡೇಷನ್ನ ಕೃಷಿ ವಿಭಾಗದಲ್ಲಿ ಉದ್ಯೋಗಿಯಾಗಿದ್ದ. ಉಗ್ರ ಸಂಘಟನೆಯಿಂದ ನನಗೆ ಬೆದರಿಕೆ ಇದೆ. ನಮ್ಮ ಕುಟುಂಬಕ್ಕೂ ಅಪಾಯ ಇದೆ ಎಂದು ಮೂರು ಪುಟಗಳ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿವೇಕ್ ಯಾವ ಸಂಘಟನೆಗೂ ಸೇರದೆ ದೇಶಭಕ್ತಿ ಬೆಳೆಸಿಕೊಂಡಿದ್ದನು. ಆದರೆ ಪತ್ರದಲ್ಲಿ ಉಗ್ರ ಸಂಘಟನೆಯ ಬಗ್ಗೆ ಉಲ್ಲೇಖಿಸಿದ್ದು, ಸದ್ಯ ಚರ್ಚೆಯ ವಿಷಯವಾಗಿದೆ. ನೇಣು ಹಾಕಿಕೊಂಡು ಸಾಯಲು ಕಾರಣಗಳೂ ಇರಲಿಲ್ಲ. ಆದರೆ ಕಳೆದ ರಾತ್ರಿ ಮನೆಯಲ್ಲೇ ನೇಣು ಬಿಗಿದು ಸಾವನ್ನಪ್ಪಿದ್ದಾನೆ.
ನನ್ನ ಸಾವಿಗೆ ಉಗ್ರ ಸಂಘಟನೆಯೇ ಕಾರಣ. ಮನೆಮಂದಿಗೂ ಅವರಿಂದ ಅಪಾಯವಾಗುವ ಸಾಧ್ಯತೆಯಿದೆ. ಈ ಹಿಂದೆ ಅವರಿಂದ ನನಗೆ ಕೊಲೆ ಬೆದರಿಕೆಯಿತ್ತು. ಎರಡು ವರ್ಷದ ಹಿಂದೆ ಆಕಸ್ಮಿಕವಾಗಿ ಪರಿಚಯವಾದ ಸಂಘಟನೆ ಅದಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅವರ ಅಸ್ತಿತ್ವವಿದೆ. ಮೊಬೈಲ್ ಬಳಸದ ಆ ಸಂಘಟನೆ ಬಗ್ಗೆ ಅನುಮಾನ ಬಂದು ಹಲವು ಮಾಹಿತಿ ಕಲೆ ಹಾಕಿದ್ದು ಅದು ಅವರಿಗೆ ತಿಳಿದು ತನಗೆ ಕೊಲೆ ಬೆದರಿಕೆ ಹಾಕಿದ್ದರು. ಅವರಿಗೆ ರಾಜಕೀಯ ಬೆಂಬಲವೂ ಇದೆ. ನಾನು ಸಂಗ್ರಹಿಸಿದ ದಾಖಲೆಗಳು, ಫೋಟೋಗಳನ್ನು ಪೊಲೀಸರಿಗೆ, ಮಾಧ್ಯಮಕ್ಕೆ ನೀಡುವ ಆಲೋಚನೆಯಲ್ಲಿದ್ದು, ಆಗಸ್ಟ್ ತಿಂಗಳಿನಲ್ಲಿ ಆ ಮೊಬೈಲ್ ಕಳೆದುಹೋಗಿದೆ.
ಇನ್ನೊಂದು ಮೆಮೊರಿ ಚಿಪ್‍ನಲ್ಲಿ ಒಂದಷ್ಟು ದಾಖಲೆಗಳಿದ್ದು ಆ ಚಿಪ್ ಕೂಡ ಸಿಕ್ಕಿಲ್ಲ. ತನಗೆ ಅವರು ಬಹಳಷ್ಟು ಹಿಂಸೆ ನೀಡಿದ್ದು, ಅವರಿಂದ ತಪ್ಪಿಸಿಕೊಳ್ಳುವಪ್ರಯತ್ನ ಮಾಡಿದರೂ ನನ್ನಿಂದ ಅಸಾಧ್ಯವಾಗಿತ್ತು. ಇವರಿಂದ ನನ್ನ ಮನೆಯವರನ್ನು ಉಳಿಸಿಕೊಳ್ಳಲು ನನ್ನ ಸಾವು ದಾರಿಯೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ದೇಹವನ್ನು ದಾನ ಮಾಡಿ. ಮನೆಯವರು ಒಪ್ಪದಿದ್ದಲ್ಲಿ ಕಣ್ಣು ದಾನವಾದರೂ ಮಾಡಿ. ದೇಹವನ್ನು ಅಗ್ನಿಸ್ಪರ್ಷ ಮಾಡುವ ಬದಲು ಮನೆಯ ತೋಟದಲ್ಲಿ ಹೂಳಿರಿ ಇದು ನನ್ನ ಕೊನೆಯಾಸೆ. ಜಾತಿ, ಹಣ, ಅಹಂಕಾರ, ರಾಜಕೀಯ, ಸ್ವಾರ್ಥ, ಅಧಿಕಾರ ಬಿಟ್ಟು ಎಲ್ಲರೂ ಮನುಷ್ಯರಾಗಿ ಬದುಕಿ ದೇಶವನ್ನು ಸ್ವಾರ್ಥಕ್ಕಾಗಿ ಬಲಿಕೊಡಬೇಡಿ ಎಂಬ ವಾಕ್ಯದೊಂದಿಗೆ ಡೆತ್ ನೋಟ್ ಮುಗಿಸಿದ್ದಾನೆ.
ಮೂರು ಪುಟಗಳ ಡೆತ್‍ನೋಟ್ ನಲ್ಲಿರುವ ವಿಚಾರದ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಭೇದಿಸಲು ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದೇವೆ. ಆತನ ಗೆಳೆಯರು, ಸಂಬಂಧಿಕರು ಮನೆಯವರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ. ಇದರ ಜೊತೆ ತಜ್ಞರನ್ನು ಭೇಟಿ ಮಾಡಿದ್ದೇವೆ. ಪತ್ರದ ಬಗ್ಗೆ ಕೂಡ ಕೂಲಂಕುಶ ತನಿಖೆ, ವೈದ್ಯರ ಅಭಿಪ್ರಾಯ ಪಡೆಯಲಾಗುವುದು ಅಂತ ಎಸ್‍ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.