LATEST NEWS
ಮಳಲಿ ಮಸೀದಿ ವಿವಾದ – ಹೈಕೋರ್ಟ್ ಮಹತ್ವದ ಆದೇಶ
ಮಂಗಳೂರು ಜೂನ್ 14 : ಮಂಗಳೂರಿನ ಮಳಲಿ ಮಸೀದಿ ವಿವಾದ ಕುರಿತಂತೆ ರಾಜ್ಯ ಹೈಕೋರ್ಟ್ ವಿಚಾರಣೆ ನಡೆಯುತ್ತಿರುವ ಮಂಗಳೂರಿನ ಸಿವಿಲ್ ನ್ಯಾಯಾಲಯಕ್ಕೆ ಯಾವುದೇ ರೀತಿಯ ಆದೇಶ ಹೊರಡಿಸದಂತೆ ಸೂಚನೆ ನೀಡಿದೆ.
ಮಳಲಿ ಮಸೀದಿ ನವೀಕರಣ ಸಂದರ್ಭ ಮಸೀದಿಯಲ್ಲಿ ದೇವಾಲಯಗಳಲ್ಲಿ ಕಾಣ ಸಿಗುವ ಮಾದರಿಯ ನಿರ್ಮಾಣ ಕಂಡು ಬಂದ ಹಿನ್ನಲೆ, ಹಿಂದೂಪರ ಸಂಘಟನೆಗಳು ಇದು ದೇವಾಲಯಕ್ಕೆ ಸೇರಿದ್ದು ಎಂದು ನ್ಯಾಯಾಲದ ಮೇಟ್ಟಿಲೇರಿದ್ದರು. ಮಂಗಳೂರಿನ ಮೂರನೇ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ಈ ನಡುವೆ ಹೈಕೋರ್ಟ್‌ನಲ್ಲಿ ವಿಹೆಚ್‌ಪಿ ಪರವಾಗಿ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿದ್ದಾರೆ. ಕೆಳಹಂತದ ನ್ಯಾಯಾಲಯ ಮಳಲಿ ಮಸೀದಿಯ ವಾಸ್ತವ ಸ್ಥಿತಿಯನ್ನು ಮುಂದುವರೆಸಬಹುದು ಎಂದು ಸೂಚನೆ ನೀಡಿತ್ತು. ಆದರೆ ಕೆಳ ಹಂತದ ಸೂಚನೆಯನ್ನು ಒಪ್ಪದ ವಕೀಲರು ಹೈಕೋರ್ಟ್ ಮೆಟ್ಟಿಲು ಏರಿದ್ದರು ಹಾಗೂ ಸಾರ್ವಜನಿಕ ಪೂಜಾಸ್ಥಳ ಅಧಿನಿಯಮ 1991ರ ಪ್ರಕಾರ ಅರ್ಜಿ ಸಲ್ಲಿಸಿದ್ದರು. 100 ವರ್ಷ ಮೇಲ್ಪಟ್ಟ ದೇವಾಲಯಗಳಿಗೆ ಅಧಿನಿಯಮ ಅನ್ವಯವಾಗುತ್ತದೆ. ಹೀಗಾಗಿ 700 ವರ್ಷಗಳ ಹಿಂದೆ ಇದ್ದ ದೇವಾಲಯಕ್ಕೆ ಕಮಿಷನ್ ನೇಮಕ ಮಾಡಲು ವಿವೇಕ್ ರೆಡ್ಡಿ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದರು.
ಇದೀಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಂಗಳೂರು ಕೋರ್ಟ್ಗೆ ಯಾವುದೇ ಆದೇಶವನ್ನು ನೀಡುವಂತಿಲ್ಲ ಎಂದು ಸೂಚನೆ ನೀಡಿದೆ. ಮಸೀದಿಯ ಯಥಾಸ್ಥಿತಿಯನ್ನು ಮುಂದುವರಿಸುವಂತೆ ಸೂಚನೆ ನೀಡಿದ್ದು, ವಿವರವಾದ ವಿಚಾರಣೆ ನಡೆಯುವವರೆಗೆ ಕೆಳಹಂತದ ನ್ಯಾಯಾಲಯ ಯಾವುದೇ ಆದೇಶ ನೀಡುವಂತಿಲ್ಲ ಎಂದಿದೆ. ಮಳಲಿ ಮಸೀದಿ ವಿಚಾರಣೆ ಜ್ಞಾನವಾಪಿ ರೀತಿಯಲ್ಲಿ ನಡೆಯುತ್ತಿದ್ದು, ದೇವಾಲಯದ ಇತಿಹಾಸ ಮೊದಲು ತಿಳಿಯಬೇಕು, ಕಮಿಷನ್ ನೇಮಕವಾಗಿ ವರದಿ ಕೊಡುವ ತನಕ ಯಾವುದೇ ಕಾರ್ಯಚಟುವಟಿಕೆಗಳನ್ನು ನಡೆಸಬಾರದು ಎಂದು ಆದೇಶಿಸಿದೆ.