FILM
ಮಲೆಯಾಳಂ ಬಿಗ್ ಬಾಸ್ ಶೋ ನಲ್ಲಿ ಹೊಡೆದಾಟ – ಕೇರಳ ಹೈಕೋರ್ಟ್ ಗರಂ
ಕೇರಳ ಎಪ್ರಿಲ್ 15: ಮಲೆಯಾಳಂ ನಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಹಿಂಸಾತ್ಮಕ ದೃಶ್ಯಗಳು ಪ್ರಸಾರವಾಗಿದ್ದು, ಈ ಕುರಿತಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಬಿಗ್ ಬಾಸ್ ಮಲಯಾಳಂ ಸೀಸನ್ 6 ರಲ್ಲಿ ಇತ್ತೀಚೆಗೆ ಸ್ಪರ್ಧಿಯೊಬ್ಬ ಸಹಸ್ಪರ್ಧಿ ಮೇಲೆ ಕೈಮಾಡಿದ್ದರು. ಇದು ಟಿವಿಗಳಲ್ಲಿ ಪ್ರಸಾರವಾಗಿತ್ತು. ಈ ಹಿನ್ನಲೆ ಕಾರ್ಯಕ್ರಮದ ಪ್ರಸಾರವನ್ನು ತಕ್ಷಣವೇ ನಿಲ್ಲಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ವಕೀಲ ಆದರ್ಶ್ ಎಸ್ ಅವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸಮಸ್ಯೆ ಗಂಭೀರವಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಸ್ತಾಕ್ ಮತ್ತು ಎಂ ಎ ಅಬ್ದುಲ್ ಹಕೀಂ ಅವರಿದ್ದ ಪೀಠ ಕೇಂದ್ರದ ಸಲಹೆ ಸೂಚನೆಗಳ ಉಲ್ಲಂಘನೆಯಾಗಿದ್ದರೆ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಇಂತಹ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸುವ ಮೂಲಕವೂ ಇದನ್ನು ಮಾಡಬಹುದು ಎಂದು ಪೀಠ ಹೇಳಿದೆ. ಕಾರ್ಯಕ್ರಮದ ನಿರೂಪಕ ಮಲಯಾಳಂ ನಟ ಮೋಹನ್‌ಲಾಲ್, ನಿರ್ಮಾಣ ಕಂಪನಿ ಎಂಡೆಮೊಲ್ ಶೈನ್ ಇಂಡಿಯಾ ಹಾಗೂ ಪ್ರಸಾರಕ ಸಂಸ್ಥೆಗಳಾಗಿರುವ ಏಷ್ಯಾನೆಟ್ ಹಾಗೂ ಡಿಸ್ನಿ ಸ್ಟಾರ್‌ಗೂ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.