KARNATAKA
ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಡ. ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ..!
ಬೆಂಗಳೂರು : ರಾಜಧಾನಿ ಬೆಂಗಳೂರಿನ ಕೋರ ಮಂಗಲದಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿಗೆ ಪಬ್ ಆಹುತಿಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಕೋರಮಂಗಲ ಸಮೀಪದ ಮಡ್ ಪೈಪ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಮೇಲಂತಸ್ತು ಸಂಪೂರ್ಣ ಬೆಂಕಿಗಾಹುತಿಯಾಗಿದೆ.ಅಗ್ನಿ ಅವಘಡದಿಂದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ. ಕಟ್ಟಡದ ಮೇಲಂತಸ್ತಿನಲ್ಲಿ ಮಡ್ ಪೈಪ್ ಎಂಬ ಪಬ್ ನಡೆಸಲಾಗುತ್ತಿತ್ತು. ಇಂದು ಮುಂಜಾನೆ ಪಬ್ನ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡು ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಲ್ಲಿನ ಪೀಠೋಪಕರಣಗಳಿಗೆ ವ್ಯಾಪಿಸಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಪಬ್ನಿಂದ ಹೊರಬಂದಿದ್ದಾರೆ. ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆಯಿದ್ದು, ಸ್ಥಳದಲ್ಲಿ 4 ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಮಡ್ ಪೈಪ್ ಪಬ್ ಇದ್ದು, ಅದೇ ಕಟ್ಟಡದ ಕೆಲ ಅಂತಸ್ತಿನಲ್ಲಿ ಕಾರು ಶೋರೂಮ್ ಸಹ ಇತ್ತು. ಪಬ್ ಮಧ್ಯಾಹ್ನ 12 ಗಂಟೆಯ ನಂತರ ಕಾರ್ಯಾರಂಭಿಸಲಿರುವುದರಿಂದ ಹೆಚ್ಚು ಸಿಬ್ಬಂದಿ ಇರಲಿಲ್ಲ. ಆದರೆ, ಪಬ್ನಲ್ಲಿದ್ದ ಓರ್ವ ಸಿಬ್ಬಂದಿ ಕಟ್ಟಡದಿಂದ ಜಿಗಿದಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಪಬ್ನ ಕೆಲ ಸಲಕರಣೆಗಳು, ಶೀಟ್ಸ್ ಕೆಳಕ್ಕೆ ಬಿದ್ದ ಪರಿಣಾಮ ಪಾರ್ಕಿಂಗ್ ಜಾಗದಲ್ಲಿ ಕೆಲ ದ್ವಿಚಕ್ರ ವಾಹನಗಳು ಅಗ್ನಿಗಾಹುತಿಯಾಗಿವೆ. ಒಂದು ಕಾರು ಕೂಡ ಜಖಂಗೊಂಡಿದೆ. ಅಲ್ಲದೇ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ಕಟ್ಟಡದಲ್ಲಿ ಭಾರಿ ಸ್ಫೋಟವು ಸಂಭವಿಸಿದೆ.