LATEST NEWS
ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆಯ ಆರೋಪಿ ದಾವೂದ್ ಬಂಧನ

ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆಯ ಆರೋಪಿ ದಾವೂದ್ ಬಂಧನ
ಮಂಗಳೂರು ಫೆಬ್ರವರಿ 8: ಕುಖ್ಯಾತ ಟಾರ್ಗೆಟ್ ಗ್ಯಾಂಗ್ ನ ಇಲ್ಯಾಸ್ ಹತ್ಯೆ ಪ್ರಕರಣದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದಾವೂದ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ದಾವೂದ್ ಜನವರಿ 13 ರಂದು ಇಲ್ಯಾಸ್ ಮೇಲೆ ನಡೆದ ದಾಳಿ ಯಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಹೇಳಲಾಗಿದೆ.

ಹತ್ಯೆಯ ಬಳಿಕ ಬಂಧಿತ ಆರೋಪಿ ದಾವೂದ್ ಮುಂಬಯಿಯಲ್ಲಿ ತಲೆ ಮರೆಸಿಕೊಂಡಿದ್ದ, ಪ್ರಕರಣದ ತನಿಖೆ ನಡೆಸಿದ ಮಂಗಳೂರು ಪೊಲೀಸರು ದಾವೂದ್ ನನ್ನು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ಟಾರ್ಗೆಟ್ ಗ್ಯಾಂಗ್ ನ ಲೀಡರ್ ಇಲ್ಯಾಸ್ ನನ್ನು ಜನವರಿ 13 ರ ಮುಂಜಾನೆ ದುಷ್ಕರ್ಮಿಗಳು ಕೊಲೆಗೈದಿದ್ದರು. ಹಲವಾರು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಇಲ್ಯಾಸ್ ಜಾಮೀನಿನ ಮೇಲೆ ಹೊರಗೆ ಬಂದ ಎರಡು ದಿನ ಅಂತರದಲ್ಲೇ ಹತ್ಯೆಯಾಗಿದ್ದ.
ಇಲ್ಯಾಸ್ ಹತ್ಯೆ ಆರೋಪಿಗಳನ್ನು ಬಂಧಿಸಲು ಮಂಗಳೂರು ಪೊಲೀಸರ ಮೂರು ತಂಡಗಳನ್ನು ರಚಿಸಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಈಗ ಪ್ರಮುಖ ಆರೋಪಿಯ ಬಂಧನವಾಗಿದ್ದು , ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಇಬ್ಬರ ಬಂಧನವಾಗಿದೆ. ಇತ್ತೀಚೆಗಷ್ಟೇ ಮತ್ತೊಬ್ಬ ಆರೋಪಿ ಸಮೀರ್ ನನ್ನು ಕೇರಳದಲ್ಲಿ ಬಂಧಿಸಿದ್ದರು..
ಪ್ರಕರಣದ ವಿವರ
ಮಂಗಳೂರಿನ ಜಪ್ಪು ಕುಡ್ಪಾಡಿ ಎಂಬಲ್ಲಿರುವ ಮಸೀದಿಯ ಎದುರುಗಡೆಯ ಫ್ಲಾಟ್ ನಲ್ಲಿ ಪತ್ನಿಯೊಂದಿಗೆ ಇಲ್ಯಾಸ್ ವಾಸವಾಗಿದ್ದ. ಜನವರಿ 13 ರಂದು ಮುಂಜಾನೆ ದುಷ್ಕರ್ಮಿಗಳಿಬ್ಬರು ಮನೆ ಬಾಗಿಲನ್ನು ಬಡಿದು ಒಳ ನುಗ್ಗಿ ಮಲಗಿದ್ದ ಇಲ್ಯಾಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಲ್ಯಾಸ್ ನನ್ನು ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಲ್ಯಾಸ್ ಮೃತ ಪಟ್ಟಿದ್ದ.