LATEST NEWS
ಪ್ಯಾಡ್ ಮ್ಯಾನ್ ತರಹ ಮಂಗಳೂರಿನಲ್ಲೊಂದು ಪ್ಯಾಡ್ ಗ್ರೂಪ್
ಪ್ಯಾಡ್ ಮ್ಯಾನ್ ತರಹ ಮಂಗಳೂರಿನಲ್ಲೊಂದು ಪ್ಯಾಡ್ ಗ್ರೂಪ್
ಮಂಗಳೂರು ಫೆಬ್ರವರಿ 8: ನಾಳೆ ತೆರೆ ಕಾಣಲಿರುವ ಅಕ್ಷಯ್ ಕುಮಾರ್ ಅವರ ಬಹು ನಿರೀಕ್ಷಿತ ಸಿನೆಮಾ ಪ್ಯಾಡ್ ಮ್ಯಾನ್ ತನ್ನ ಟ್ರೈಲರ್ ಮೂಲಕ ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಮಹಿಳೆಯರ ಗಂಭೀರ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರಕತೆ ಹಣೆಯಲಾಗಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅರುಣಾಚಲಂ ಮುರುಘನಾಥನ್ ಅವರ ಜೀವನ ಆಧಾರಿತ ಚಿತ್ರ ಇದಾಗಿದೆ. ಇದೇ ರೀತಿಯ ಯುವತಿಯರಲ್ಲಿ ಸ್ವಚ್ಚತೆ ಮೂಡಿಸುತ್ತಿರುವ ಗ್ರೂಪ್ ಒಂದು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮಂಗಳೂರಿನ ಯುವ ಮನಸ್ಸುಗಳ ತಂಡ ಒಂದು ದೂರದ ಕುಗ್ರಾಮಗಳಲ್ಲಿ ಬುಡಕಟ್ಟು ಜನಾಂಗದ ಯುವತಿಯರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ತಾವೇ ತಯಾರಿಸಿದ ಹೈಜಿನಿಕ್ ಸ್ಯಾನಿಟರಿ ನ್ಯಾಪ್ಕಿನ್ ಮಾತ್ರ ವಲ್ಲದೇ ಪುಟ್ಟ ಮಕ್ಕಳ ಡೈಪರ್ ಗಳನ್ನು ವಿತರಿಸುತ್ತಿದ್ದಾರೆ. ಸ್ವಾಸ್ಥ್ಯ ಭಾರತ್ ಹೆಸರಿನ ಅಭಿಯಾನ ಆರಂಭಿಸಿರುವ ಈ ಯುವ ತಂಡ ಸದ್ದಿಲ್ಲದೇ ಎಲೆಮರೆಯ ಕಾಯಿಗಳಂತೆ ತಮ್ಮಷ್ಟಕ್ಕೆ ದೇಶ ಸೇವೆ ಮಾಡುತ್ತಿದೆ.
ಅತೀ ಹಿಂದುಳಿದ ಬುಡಕಟ್ಟು ಜನಾಂಗಗಳಲ್ಲಿಯ ಯುವತಿಯರು ಸೇರಿದಂತೆ ಮಹಿಳೆಯರು ಅನಾರೋಗ್ಯಕರ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಂಗಳೂರಿನ ಯುವ ಮನಸ್ಸುಗಳ ತಂಡ ತೊಡಗಿಸಿಕೊಂಡಿದೆ. ಸಮಾಜಸೇವಾ ಸಂಸ್ಥೆ ಕಲ್ಪ ಟ್ರಸ್ಟ್ ಅಡಿಯಲ್ಲಿ ಬಟ್ಟೆ ಬ್ಯಾಂಕ್ ಒಂದನ್ನು ಆರಂಭಿಸಿರುವ ಈ ಯುವ ತಂಡ ಸ್ಯಾನಿಟರಿ ನ್ಯಾಪ್ಕಿನ್ ಮಕ್ಕಳ ಡೈಪರ್ ಗಳನ್ನು ತಯಾರಿಸಿ ಬುಡಕಟ್ಟು ಜನಾಂಗದ ಯುವತಿಯರಿಗೆ ಮಹಿಳೆಯರಿಗೆ ಹಂಚುತಿದೆ. ಸ್ವಸ್ಥ ಭಾರತದ ಪರಿಕಲ್ಪನೆಯಡಿ ತಮ್ಮ ಉತ್ಪನ್ನ ಗಳಿಗೂ ಈ ಯುವ ತಂಡ ಸ್ವಾಸ್ಥ್ಯ ಎಂದೇ ಹೆಸರಿಟ್ಟಿದೆ.
ಬುಡಕಟ್ಟು ಜನಾಂಗಗಳ ಯುವತಿಯರು ಹಾಗೂ ಮಹಿಳೆಯರಿಗೆ ಆರೋಗ್ಯದ ಪಾಠ ಹೇಳುತಿದ್ದು , ಸ್ವಚ್ಚ ದೇಹ, ಸ್ವಚ್ಚ ಮನಸ್ಸು ಸೇರಿದಂತೆ ಸ್ವಚ್ಚ ಪರಿಸರದ ಕುರಿತು ಜಾಗೃತಿ ಮೂಡಿಸುತ್ತಿದೆ. ಈ ಹಿಂದುಳಿದ ಬುಡಕಟ್ಟು ಜನಾಂಗದ ಯುವತಿಯರು ಋತುಮತಿಯರಾದ ಬಳಿಕ ಬಳಸುವ ಅನಾರೋಗ್ಯಕರ ವಸ್ತುಗಳನ್ನು ತ್ಯಜಿಸುವಂತೆ ಮಾಡಿರುವ ಈ ಯುವ ತಂಡ ತಾವೇ ತಯಾರಿಸಿದ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ವಿತರಿಸುತ್ತಿದೆ.
ಈ ಸಮಾಜಮುಖಿ ಚಿಂತನೆ ಆರಂಭವಾಗಿದ್ದೆ ಒಂದು ರೋಚಕತೆ. ಮಂಗಳೂರಿನ ಕಲ್ಪ ಟ್ರಸ್ಟ್ ನಿಂದ ಈ ಚಿಂತನೆ ಆರಂಭವಾಯಿತು. ಉಪನ್ಯಾಸಕಿ ಪ್ರಮೀಳಾ ರಾವ್ ಹಾಗೂ ಕುಟುಂಬ ಸದಸ್ಯರು. ಸಮಾಜದ ಋಣ ತೀರಿಸುವ ಉದ್ದೇಶದಿಂದ 13 ವರ್ಷಗಳ ಹಿಂದೆ ಈ ಟ್ರಸ್ಟ ನ್ನು ಹುಟ್ಟುಹಾಕಿದರು. ಇಂದಿನ ಯುವ ಪೀಳಿಗೆ ಸಮಾಜಮುಖಿಯಾಗಬೇಕು, ಸಮಾಜದ ಸುಧಾರಣೆಗೆ ಯುವ ಮನಸ್ಸುಗಳು ಸ್ಪಂದಿಸಬೇಕು ಎಂಬ ಚಿಂತನೆಯಿಂದ ಈ ಕಲ್ಪ ಟ್ರಸ್ಟ್ ಆರಂಭಗೊಂಡಿತು. ಈ ಚಿಂತನೆಗೆ ಕೈಜೋಡಿಸಿದ್ದು ಮಂಗಳೂರಿನ ಕೆಲ ಕಾಲೇಜಿನ ವಿಧ್ಯಾರ್ಥಿ, ವಿಧ್ಯಾರ್ಥಿನಿಯರು.
ಬುಡಕಟ್ಟು ಹಾಡಿಗಳಲ್ಲಿ ಹಾಡಿಯ ಯುವತಿಯರು ಹಾಗೂ ಮಹಿಳೆಯರು ಋತುಮತಿಯರಾದ ಬಳಿಕ ಉಪಯೋಗಿಸಲು ಅನಾರೋಗ್ಯಕರ ವಸ್ತುಗಳು ಹಾಗೂ ಅದರಿಂದಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ವಿಧ್ಯಾರ್ಥಿಗಳು ಇದಕ್ಕೊಂದು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿದರು.
ಆ ಹೊತ್ತಿಗೆ ವಿಧ್ಯಾರ್ಥಿಗಳ ಗಮನಕ್ಕೆ ಬಂದದ್ದು ದೆಹಲಿಯ ಗೂಂಜ್ ಎಂಬ ಸಂಸ್ಥೆ. ಈ ಸಂಸ್ಥೆ ಸರಳವಾಗಿ ಸ್ಯಾನಿಟರ್ ನ್ಯಾಪ್ಕಿನ್ ತಯಾರಿಸುವ ಬಗ್ಗೆ ಮಾಹಿತಿ ಪಡೆದ ವಿಧ್ಯಾರ್ಥಿಗಳು ದೆಹಲಿಗೆ ತೆರಳಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ಬಗ್ಗೆ ಮಾಹಿತಿ ಪಡೆದರು. ಇಲ್ಲಿರುವ ವಿಶೇಷತೆ ಎಂದರೆ ಈ ತರಭೇತಿಗೆ ತೆರಳಿದ್ದ ಎಲ್ಲರೂ ಹುಡುಗರು. ತರಭೇತಿ ಪಡೆದು ಮಂಗಳೂರಿಗೆ ಮರಳಿದ ವಿಧ್ಯಾರ್ಥಿಗಳು ತಮ್ಮ ಸಹಸದಸ್ಯರಿಗೂ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ತರಭೇತಿ ನೀಡಿದರು. ಹೀಗೆ ಆರಂಭವಾಯಿತು ವಿಧ್ಯಾರ್ಥಿಗಳ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಘಟಕ ಆರಂಭವಾಯಿತು.
ಪ್ರಸ್ತುತ ಮಂಗಳೂರಿನ ವಿವಿಧ ಕಾಲೇಜಿನ 34 ವಿಧ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಕಲ್ಪ ಟ್ರಸ್ಟ್ ಗೆ ಬಂದು ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುತ್ತಾರೆ. ಬುಡಕಟ್ಟು ಜನಾಂಗದ ಕುಗ್ರಾಮಗಳಲ್ಲಿ ವಿತರಿಸುತ್ತಾರೆ.
ದಾನವಾಗಿ ಬಂದ ಬಟ್ಟೆಗಳಲ್ಲಿ ಕಾಟನ್ ಬಟ್ಟೆಗಳನ್ನು ಬೇರ್ಪಡಿಸಿ ಅವುಗಳನ್ನು ಬಿಸಿ ನೀರಿನಲ್ಲಿ ಒಗೆದು ಆಕಾರಕ್ಕೆ ತಕ್ಕಂತೆ ಕತ್ತರಿಸಿ ಹತ್ತಿಗಳನ್ನು ತುಂಬಿ ಸ್ಯಾನಿಟರಿ ನ್ಯಾಪ್ಕಿನ್, ಮಕ್ಕಳ ಡೈಪರ್‍ಗಳನ್ನು ತಯಾರಿಸುವ ಈ ವಿದ್ಯಾರ್ಥಿಗಳು ತಮ್ಮ ಪ್ರೊಡಕ್ಟಗೆ ಸ್ವಾಸ್ಥ್ಯ ಎಂದು ಹೆಸರಿಟ್ಟಿದ್ದಾರೆ.
ರಾಜ್ಯದ 25 ಕ್ಕೂ ಹೆಚ್ಚು ಗಿರಿಜನ ಕಾಲೋನಿಗಳಲ್ಲಿ ಈ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ವಿತರಿಸಲಾಗುತಿದ್ದು ಸ್ವಸ್ಥ ಭಾರತದ ನಿರ್ಮಾಣಕ್ಕೆ ಈ ಕಲ್ಪ ಟ್ರಸ್ಟ್ ಹಾಗೂ ವಿಧ್ಯಾರ್ಥಿಗಳು ತಮ್ಮ ಕೊಡುಗೆ ನೀಡುತ್ತಿದ್ದಾರೆ. ಗಿರಿಜನ ಹಾಡಿ ಸೇರಿದಂತೆ ಪರಿಶಿಷ್ಠರ ಕಾಲೋನಿಗಳಿಗೆ ತೆರಳಲು ಈ ವಿಧ್ಯಾರ್ಥಿಗಳು ಅಲ್ಲಿಯ ಜನರಿಗೆ ಆರೋಗ್ಯದ ಬಗ್ಗೆ ಸ್ವಚ್ಚತೆ ಬಗ್ಗೆ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
You must be logged in to post a comment Login