LATEST NEWS
ಸೆಪ್ಟೆಂಬರ್ 17 ರಂದು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮೆಗಾ ಕೊರೊನಾ ಲಸಿಕಾ ಮೇಳ – ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ಮಂಗಳೂರು ಸೆಪ್ಟೆಂಬರ್ 14 :- ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಸೂಚ್ಯಂಕ ಕಡಿಮೆಗೊಳಿಸುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಂದು ಜಿಲ್ಲೆಯಾದ್ಯಂತ ಮೆಗಾ ವ್ಯಾಕ್ಸಿನ್ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಅಧಿಕಾರಿಗಳು ಮೆಗಾ ವ್ಯಾಕ್ಸಿನ್ ಮೇಳವನ್ನು ಯಶಸ್ವಿಗೊಳಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿರ್ವಹಣೆ ಹಾಗೂ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸೆಪ್ಟೆಂಬರ್ 17ರ ಶುಕ್ರವಾರದಂದು ಜಿಲ್ಲೆಯಲ್ಲಿ ಮೆಗಾ ವ್ಯಾಕ್ಷಿನ್ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಇನ್ನಷ್ಟು ಲಸಿಕೆಯನ್ನು ನೀಡುವಲ್ಲಿ ಗಮನಹರಿಸಬೇಕು. ಆದ್ದರಿಂದ ಆ ದಿನದಂದು ಜಿಲ್ಲೆಯಾದ್ಯಂತ 1,50,000 ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಿದ್ದು, ಜನಸಾಮಾನ್ಯರು ಸಂಪೂರ್ಣ ಸಹಕರಿಸಬೇಕು ಎಂದರು.

ಜಿಲ್ಲೆಯಲ್ಲಿ ಇದೇ ಸೆಪ್ಟೆಂಬರ್ 17ರಂದು 8,9,10 ನೇ ತರಗತಿಗಳು ಮತ್ತು 20ರಂದು 6, 7 ನೇ ತರಗತಿಗಳು ಆರಂಭವಾಗಲಿದ್ದೂ, ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದರು. ಶಾಲಾ ಆರಂಭದ ನಂತರ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳಲ್ಲಿ ಕಡ್ಡಾಯವಾಗಿ ಲಸಿಕೆ ತೆಗೆದುಕೊಂಡಿರಬೇಕು. ಜೊತೆಗೆ ಶಾಲೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ತರಗತಿಗಳನ್ನು ನಡೆಸಬೇಕು ಎಂದರು.
ಕೇರಳದಿಂದ ಜಿಲ್ಲೆಗೆ ಬರುವವವರನ್ನು ಗಡಿಭಾಗದಲ್ಲಿ ಕಡ್ಡಾಯವಾಗಿ ಕೋವಿಡ್ ನೆಗಿಟಿವ್ ರಿಪೋರ್ಟ್ ತೆಗೆದುಕೊಳ್ಳ ಬೇಕು ಹಾಗೂ ಅವರನ್ನು 7 ದಿನ ಕ್ವಾರಂಟೈನ್‍ಲ್ಲಿ ಇರಿಸಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಮನೆ ಭೇಟಿ ಮಾಡಿ ಲಸಿಕೆ ತೆಗೆದುಕೊಳ್ಳದವರ ಮಾಹಿತಿಯನ್ನು ಪಟ್ಟಿಮಾಡಬೇಕು. ಆಯಾ ವ್ಯಾಪ್ತಿಯ ಪಿಡಿಓ, ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೂಲಕ ಲಸಿಕೆ ಆಗದವರ ಪಟ್ಟಿ ಪಡೆದುಕೊಂಡು ಕಡ್ಡಾಯವಾಗಿ ಲಸಿಕೆಯನ್ನು ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯತ್ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಮೆಗಾ ವ್ಯಾಕ್ಸಿನ್ ಮೇಳದ ಕುರಿತು ಮಾಧ್ಯಮಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ವ್ಯಾಪಕ ಪ್ರಚಾರ ನೀಡಬೇಕು. ಜಿಲ್ಲೆಗೆ ನೀಡಿದ ಲಸಿಕಾ ಗುರಿಯನ್ನು ಸಾಧಿಸಬೇಕು ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್, ವೆನ್‍ಲಾಕ್ ಜಿಲ್ಲಾಸ್ಪತ್ರೆಯ ಶಸ್ರ್ತಚಿಕಿತ್ಸಕರಾದ ಸದಾಶಿವ ಶಾನುಭೋಗ್ ಹಾಗೂ ಇತರ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.