KARNATAKA
ಮಡಿಕೇರಿ : ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಕೊಂದ ಕಾಡಾನೆ ಕೊನೆಗೂ ಸೆರೆ..!

ಅರಣ್ಯ ಸಿಬ್ಬಂದಿಯನ್ನೇ ಬಲಿ ಪಡೆದಿದ್ದ ಕಾಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಮಡಿಕೇರಿ ಬಳಿಯ ಕೆದಕಲ್ನಲ್ಲಿ ಸೆರೆ ಹಿಡಿಯುವುದಲ್ಲಿ ಯಶಸ್ಸು ಕಂಡಿದ್ದಾರೆ.
ಕೊಡಗು: ಅರಣ್ಯ ಸಿಬ್ಬಂದಿಯನ್ನೇ ಬಲಿ ಪಡೆದಿದ್ದ ಕಾಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಮಡಿಕೇರಿ ಬಳಿಯ ಕೆದಕಲ್ನಲ್ಲಿ ಸೆರೆ ಹಿಡಿಯುವುದಲ್ಲಿ ಯಶಸ್ಸು ಕಂಡಿದ್ದಾರೆ.

ದುಬಾರೆ ಆನೆ ಶಿಬಿರದ ಕರೆ ತಂದ 5 ಸಾಕಾನೆಗಳ ನೆರವಿನಿಂದ ಸುಮಾರು 100 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟು ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಒಂದು ವಾರದಿಂದ ಆತಂಕ ಸೃಷ್ಟಿಸಿದ್ದ ಕಾಡಾನೆ ಸೆರೆಯಿಂದ ಸ್ಥಳಿಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ನಿನ್ನೆಯಿಂದ ಕಾಫಿ ತೋಟದಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಕಾಫಿ ತೋಟದಲ್ಲಿ ಕಾಣಿಸಿಕೊಂಡ ಕಾಡಾನೆಯ ಪತ್ತೆ ಮಾಡಿ ಮಧ್ಯಾಹ್ನದ ವೇಳೆಗೆ ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು.
ನಂತರ ಸ್ವಲ್ಪ ದೂರ ಓಡಿಹೋಗಿ ಸುಸ್ತಾಗಿ ಕೆಳಗೆ ಬಿದ್ದಿದ್ದ ಆನೆಗೆ ಮಾವುತರು ಮತ್ತು ಕಾವಾಡಿಗಳು ಹಗ್ಗ ಕಟ್ಟಿ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದಿದ್ದಾರೆ.
ಸುಟಿಕೊಪ್ಪ ಸಮೀಪದ ಕೆದಕಲ್ ಗ್ರಾಪಂ ವ್ಯಾಪ್ತಿಯ ಡಿ ಬ್ಲಾಕ್ ಬಳಿ ಬೈಕ್ನಲ್ಲಿ ಮರದ ಕೆಲಸಕ್ಕೆ ಎಂದು ತೆರಳುತ್ತಿದ್ದ ಸುಂಟಿಕೊಪ್ಪದ ನಿವಾಸಿ ಮುರುಗೇಶ್ ಎಂಬುವವರ ಮೇಲೆ ಒಂಟಿಸಲಗ ಮೊದಲು ದಾಳಿ ಮಾಡಿತ್ತು.
ಇದರಿಂದ ಗಾಯಗೊಂಡಿದ್ದ ಮುರುಗೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಘಟನೆಯಿಂದ ಬೈಕ್ಗೆ ಹಾನಿಯಾಗಿತ್ತು.
ಅಲ್ಲಿಂದ ಕಾಲ್ಕಿತ್ತ ಕಾಡಾನೆ ಸ್ವಲ್ಪ ದೂರದಲ್ಲೇ ಇದ್ದ ಹಬೀಬ್ ತೋಟದತ್ತ ತೆರಳಿ ಮತ್ತೊಬ್ಬ ವ್ಯಕ್ತಿಯ ಮೇಲೂ ದಾಳಿ ಮಾಡಿತ್ತು.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿಕೊಂಡು ಬಂದ ಕಾಡಾನೆ, ಗಿರೀಶ್ ಮೇಲೆ ದಾಳಿ ಮಾಡಿ ತುಳಿದು ಹಾಕಿದೆ. ಇದರಿಂದ ಗಿರೀಶ್ ಸಾವನ್ನಪ್ಪಿದ್ದರು.