Connect with us

LATEST NEWS

‘ಮದ್ದಲೆ ಮಾಂತ್ರಿಕ’ ಖ್ಯಾತಿಯ ಶತಾಯುಷಿ ಹಿರಿಯಡ್ಕ ಗೋಪಾಲ ರಾವ್ ವಿಧಿವಶ

ಉಡುಪಿ, ಅಕ್ಟೋಬರ್  18: ಯಕ್ಷಗಾನ ಕ್ಷೇತ್ರದ ಅನರ್ಘ್ಯ ರತ್ನಗಳಲ್ಲಿ ಒಬ್ಬರಾಗಿದ್ದ ‘ಮದ್ದಲೆ ಮಾಂತ್ರಿಕ’ ಖ್ಯಾತಿಯ ಶತಾಯುಷಿ ಹಿರಿಯಡ್ಕ ಗೋಪಾಲರಾಯರು ನಿನ್ನೆ ರಾತ್ರಿ ಉಡುಪಿ ಹಿರಿಯಡ್ಕದ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು. ಅವರು ಪುತ್ರ, ಅಪಾರ ಬಂಧುಮಿತ್ರರು ಹಾಗೂ ಅಭಿಮಾನಿ ವೃಂದವನ್ನು ಅಗಲಿದ್ದಾರೆ.

ಕರಾವಳಿಯ ಮೂರು ಜಿಲ್ಲೆಗಳ ಯಕ್ಷಗಾನ ಲೋಕದಲ್ಲಿ ‘ಮದ್ದಲೆ ಮಾಂತ್ರಿಕ’ ರೆಂದೇ ಹೆಸರಾದ ಹಿರಿಯಡ್ಕ ಗೋಪಾಲರಾಯರು ಕಳೆದ ವರ್ಷ ತಮ್ಮ ನೂರು ವರ್ಷ ಪ್ರಾಯದಲ್ಲೂ ನವತಾರುಣ್ಯದ ಎಲ್ಲಾ ಛಾಪನ್ನು ತೋರಿಸಿ ತಮ್ಮ ಕೈಬೆರಳುಗಳಲ್ಲಿದ್ದ ಮದ್ದಲೆಯ ಮಾಂತ್ರಿಕತೆಯನ್ನು ತೋರಿಸಿ ಕಲಾಪ್ರೇಮಿಗಳು ಮತ್ತು ತನ್ನ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದರು.

1919ರ ಡಿ.15ರಂದು ಹಿರಿಯಡ್ಕದಲ್ಲಿ ಜನಿಸಿದ ಗೋಪಾಲರಾಯರು ಕಲಿತಿದ್ದು 6ನೇ ತರಗತಿಯವರೆಗೆ ಮಾತ್ರ. ಆದರೆ ಯಕ್ಷಗಾನ ಚೌಕಿ ಹಾಗೂ ರಂಗಸ್ಥಳದಲ್ಲಿ ಅವರು ಕಲಿತಿದ್ದು ಬದುಕಿನ ಕಲೆಯನ್ನು ಮಾತ್ರ. 16ನೇ ವಯಸ್ಸಿನಲ್ಲಿ ತಂದೆ ಶೇಷಗಿರಿ ರಾವ್ ರಿಂದ ಮದ್ದಲೆಯನ್ನು ಅಭ್ಯಾಸ ಮಾಡಿದ ಗೋಪಾಲರಾಯರು ಬಳಿಕ ನೃತ್ಯವನ್ನು ಗುರು ನಾಗಪ್ಪ ಕಾಮತರಿಂದ ಕಲಿತರು.

1934ರಲ್ಲಿ ಹಿರಿಯಡ್ಕ ಮೇಳದಲ್ಲಿ ಪಾತ್ರಧಾರಿಯಾಗಿ ಪ್ರವೇಶ ಪಡೆದ ಅವರು 1936ರಲ್ಲಿ ಸಹ ಮದ್ದಲೆ ಕಲಾವಿದರಾದರು. ಮುಂದಿನ ವರ್ಷವೇ ಪೆರ್ಡೂರು ಮೇಳದಲ್ಲಿ ಪ್ರಧಾನ ಮದ್ದಲೆಕಾರರಾಗಿ ಸೇರಿದ ಗೋಪಾಲರಾಯರು ನಂತರ ಹಿಂದಿರುಗಿ ತಿರುಗಿ ನೋಡದೆ ಯಶಸ್ಸಿನ ಮೆಟ್ಟಲುಗಳನ್ನು ಏರುತ್ತಲೇ ಹೋದರು. 1939ರಿಂದ 67ರವರೆಗೆ ಅವರು ಅಂದು ಬಡಗುತಿಟ್ಟಿನ ಪ್ರಧಾನ ಮೇಳ ವಾದ ಮಂದಾರ್ತಿ ಮೇಳದ ಪ್ರಧಾನ ಮದ್ದಲೆಕಾರರಾಗಿ ದುಡಿದರು.

ಈ ನಡುವೆ 1961ರಲ್ಲಿ ಕೋಟ ಶಿವರಾಮ ಕಾರಂತರ ಸಂಪರ್ಕಕ್ಕೆ ಬಂದ ಗೋಪಾಲ ರಾಯರು, ಅವರ ಯಕ್ಷಗಾನ ನೃತ್ಯಗಳಿಗೆ ಹಾಗೂ ಯಕ್ಷಗಾನ ಗೋಷ್ಠಿಗಳಲ್ಲಿ ಮದ್ದಲೆಕಾರರಾಗಿ ಕಾರ್ಯನಿರ್ವಹಿಸಿದರು. ಕಾರಂತರ ಒಡನಾಟ ಸಿಕ್ಕ ಬಳಿಕ ಗೋಪಾಲರಾಯರ ಯಕ್ಷಗಾನ ಬದುಕಿಗೆ ಹೊಸ ದಾರಿ ದೊರೆತಂತಾಯಿತು. ಮುಂದೆ 1968ರಲ್ಲಿ ಕಾರಂತರು ಬ್ರಹ್ಮಾವರದಲ್ಲಿ ಪ್ರಾರಂಭಿಸಿದ ಯಕ್ಷಗಾನ ಕೇಂದ್ರಕ್ಕೆ ಅಧ್ಯಾಪಕರಾಗಿ ಸೇರಿದರು.

ಮರು ವರ್ಷ ಪೀಟರ್ ಕ್ಲಾಸ್‌ರ ಜೊತೆ ಕ್ಯಾಲಿಫೋರ್ನಿಯ ವಿವಿಯಲ್ಲಿ ಕೆಲಸ ಮಾಡಿದರು. 1970ರಲ್ಲಿ ಕಾರಂತರ ಸಲಹೆಯಂತೆ ಉಡುಪಿಗೆ ಮರಳಿದ ಗೋಪಾಲರಾಯರು, ಇಲ್ಲಿ ಯಕ್ಷಗಾನದಲ್ಲಿ ಡಾಕ್ಟರೇಟ್ ಮಾಡಲು ಬಂದ ಮಾರ್ತಾ ಆಸ್ಟನ್‌ಗೆ ಯಕ್ಷಗಾನ ನೃತ್ಯ ಕಲಿಸಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದರು.

ಹಲವು ಬಾರಿ ಯಕ್ಷಗಾನ ತಂಡಗಳೊಂದಿಗೆ ವಿದೇಶಿ ಪ್ರಯಾಣ ನಡೆಸಿದ ಗೋಪಾಲರಾಯರಿಗೆ 1972ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1997ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 1998ರಲ್ಲಿ ಜಾನಪದಶ್ರೀ ಪ್ರಶಸ್ತಿ, 2012ರಲ್ಲಿ ಜಾನಪದ ಸಿರಿ ಪ್ರಶಸ್ತಿಗಳನ್ನು ಪಡೆದಿದ್ದರು. 2018ರಲ್ಲಿ ಅವರಿಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಸ್ವತಹ ಸಚಿವೆ ಜಯಮಾಲ ಅವರೇ ಹಿರಿಯಡ್ಕದ ಅವರಿಗೆ ಮನೆಗೆ ಬಂದು ಪ್ರಶಸ್ತಿ ಪ್ರದಾನ ಮಾಡಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *