LATEST NEWS
ಯುವತಿ ಮಿಸ್ಸಿಂಗ್ ಹಿಂದಿತ್ತು ಟ್ವಿಸ್ಟ್ ; ಲವ್ ಜಿಹಾದ್ ಗೆ ಬಲಿಯಾದ್ಲಾ 18ರ ಬಾಲೆ..!?

ಉಡುಪಿ, ಜೂನ್ 13: ಪ್ರೇಮ ಪ್ರಕರಣ ಠಾಣೆ ಮೆಟ್ಟಿಲೇರಿದ ಬಳಿಕ ಹುಡುಗನ ವಿರುದ್ಧವೇ ತಿರುಗಿ ಬಿದ್ದಿದ್ದ ಯುವತಿಯೊಬ್ಬಳು ಹಠಾತ್ ನಾಪತ್ತೆಯಾಗಿದ್ದಲ್ಲದೆ, ಹಾಸನದಲ್ಲಿ ಮಾಜಿ ಪ್ರಿಯಕರನ ಜೊತೆಗೇ ಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಹುಡುಗಿ ನಾಪತ್ತೆ ಬಗ್ಗೆ ಪೋಷಕರು ಮಲ್ಪೆ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ನಾಪತ್ತೆಯಾಗಿದ್ದ ಹಿಂದು ಯುವತಿಯನ್ನು ಹಾಸನದಲ್ಲಿ ಹಳೆ ಪ್ರೇಮಿಯ ಜೊತೆಗೇ ಪತ್ತೆ ಮಾಡಿದ್ದಾರೆ. ಯುವಕ ಮುಸ್ಲಿಂ ಆಗಿರುವ ಹಿನ್ನೆಲೆಯಲ್ಲಿ ಪ್ರಕರಣ ಈಗ ಹಿಂದು ಸಂಘಟನೆಗಳಿಂದ ಲವ್ ಜಿಹಾದ್ ಆರೋಪಕ್ಕೆ ಗುರಿಯಾಗಿದೆ.
ಪ್ರಕರಣದ ಹಿನ್ನೆಲೆ…
ಬ್ರಹ್ಮಾವರದ ನಿವಾಸಿಯಾಗಿದ್ದ ಹುಡುಗಿ ಕಳೆದೆರಡು ವರ್ಷಗಳಿಂದ ಉಡುಪಿಯ ಕಾಲೇಜಿಗೆಂದು ಬಸ್ಸಿನಲ್ಲಿ ಬಂದು ಹೋಗುತ್ತಿದ್ದಳು. ಈ ವೇಳೆ, ಬಸ್ ಚಾಲಕನಾಗಿದ್ದ ಉಡುಪಿಯ ಸಂತೆಕಟ್ಟೆ ನಿವಾಸಿ ಅಜರ್ ಜೊತೆಗೆ ಯುವತಿಗೆ ಲವ್ ಆಗಿದ್ದು ಆನಂತ್ರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಯುವತಿಗೆ 18 ವರ್ಷ ಪೂರ್ತಿಯಾಗದ್ದರಿಂದ ಮದುವೆ ಸಾಧ್ಯವಾಗಿರಲಿಲ್ಲ. ಆನಂತ್ರ ಇತ್ತೀಚೆಗೆ ಯುವತಿಗೆ ಪ್ರಾಯ ಪೂರ್ತಿಯಾಯ್ತು ಅನ್ನೋದು ಗೊತ್ತಾದ ತಕ್ಷಣ ಯುವಕ ಅಜರ್, ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಡಬಡಾಯಿಸಿ ಮದುವೆಯಾಗಿದ್ದಾನೆ. ಆನಂತ್ರ, ಹುಡುಗಿಯ ಫೋಟೊ ಮತ್ತು ವಿಳಾಸವನ್ನು ರಿಜಿಸ್ಟ್ರಾರ್ ಕಚೇರಿಯ ನೋಟಿಸ್ ಬೋರ್ಡಿನಲ್ಲಿ ಅಂಟಿಸಲಾಗಿತ್ತು. ಇಷ್ಟಾಗುತ್ತಿದ್ದಂತೆ ಹುಡುಗಿ ಮನೆಯವರಿಗೆ ಅದ್ಹೇಗೋ ವಿಷಯ ಗೊತ್ತಾಗಿದ್ದು ಹುಡುಗಿಯನ್ನು ಬೈದು ಬುದ್ಧಿ ಮಾತು ಹೇಳಿ ಮನೆಯಲ್ಲೇ ಇರಿಸಿದ್ದರು.

ಆನಂತ್ರ ಯುವಕ ಅಜರ್, ತನ್ನ ಪತ್ನಿಯನ್ನು ಗೃಹಬಂಧನದಲ್ಲಿ ಇಟ್ಟಿದ್ದಾರೆಂದು ಹುಡುಗಿ ಮನೆಯವರ ವಿರುದ್ಧವೇ ಪೊಲೀಸ್ ದೂರು ನೀಡಿದ್ದ. ಪೊಲೀಸರು ಹುಡುಗಿ ಮನೆಯವರಿಗೆ ಸಮನ್ಸ್ ನೀಡಿ ಠಾಣೆಗೆ ಬರಹೇಳಿದ್ದಾರೆ. ವಿಚಾರಣೆ ಬಳಿಕ ಯುವತಿ, ಯುವಕನ ವಿರುದ್ಧ ಹೇಳಿಕೆ ನೀಡಿದ್ದಲ್ಲದೆ ಆತ ತನ್ನನ್ನು ವಂಚಿಸಿದ್ದಾಗಿ ಪೊಲೀಸರ ಮುಂದೆ ಹೇಳಿದ್ದಾಳೆ. ಮದುವೆ ರಿಜಿಸ್ಟ್ರೀಗೆ ಸಹಿ ಹಾಕಿದ ಮೂರು ಮಂದಿಯ ವಿರುದ್ಧವೂ ಹೇಳಿಕೆ ನೀಡಿದ್ದರಿಂದ ವಿವಾದ ಇತ್ಯರ್ಥಪಡಿಸಿದ್ದ ಪೊಲೀಸರು ಹುಡುಗಿಯನ್ನು ಆಕೆಯ ಪೋಷಕರೊಂದಿಗೆ ಕಳಿಸಿಕೊಟ್ಟಿದ್ದರು.
ಇವೆಲ್ಲ ನಾಟಕೀಯ ಸನ್ನಿವೇಶಗಳಾದ ಬಳಿಕ ಮಲ್ಪೆಯ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಹುಡುಗಿ ಹಠಾತ್ತಾಗಿ ಮೊನ್ನೆ ಗುರುವಾರ ಬೆಳಗ್ಗೆ ಕಾಣೆಯಾಗಿದ್ದಳು. ಮತ್ತೆ ನಾಪತ್ತೆ ಕೇಸು ಮಲ್ಪೆ ಪೊಲೀಸರ ಹೆಗಲೇರಿತ್ತು. ಒಂದೇ ದಿನದಲ್ಲಿ ಟ್ರೇಸ್ ಮಾಡಿದ್ದ ಪೊಲೀಸರು ಹಾಸನದಲ್ಲಿ ಮಾಜಿ ಪ್ರೇಮಿ ಅಜರ್ ಜೊತೆಗಿದ್ದ ಹುಡುಗಿಯನ್ನು ಪತ್ತೆ ಮಾಡಿದ್ದಾರೆ. ಆದರೆ, ಯುವಕ ಅಜರ್ ಮತ್ತೆ ನಾಟಕ ಆಡಿದ್ದಾನೆ. ತನಗೇನು ಗೊತ್ತಿಲ್ಲ. ಹುಡುಗಿ ಏನ್ ಪ್ಲಾನ್ ಮಾಡ್ಕೊಂಡು ಬಂದಿದ್ದಾಳೋ ಏನೋ ಅಂತ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಈಗ ಇಬ್ಬರನ್ನೂ ಮಲ್ಪೆ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಮುಖಂಡ ಮಹೇಶ್ ಬೈಲೂರು, ಪ್ರಕರಣದ ಹಿಂದೆ ಲವ್ ಜಿಹಾದ್ ಜಾಲ ಇರುವ ಬಗ್ಗೆ ಶಂಕಿಸಿದ್ದಾರೆ. ಮುಸ್ಲಿಂ ಯುವಕ ಹಿಂದು ಯುವತಿಯನ್ನು ಲವ್ ಜಿಹಾದ್ ಬಲೆಗೆ ಸಿಲುಕಿಸಿದ್ದಾನೆ. ಈ ಬಗ್ಗೆ ಸಮಗ್ರ ತನಿಖೆಗೊಳಪಡಿಸಿ, ಸಂತ್ರಸ್ತ ಯುವತಿಯನ್ನು ಜಿಹಾದಿಯಿಂದ ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.