DAKSHINA KANNADA
ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೆಲಿಕಾಪ್ಟರ್ ಮೂಲಕ ಯಶ್, ಹೊಡೆಯುವುದೇ ಸಂಪ್ರದಾಯ ಮತ್ತೆ ರಿವರ್ಸ್ ?
ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೆಲಿಕಾಪ್ಟರ್ ಮೂಲಕ ಯಶ್, ಹೊಡೆಯುವುದೇ ಸಂಪ್ರದಾಯ ಮತ್ತೆ ರಿವರ್ಸ್ ?
ಮಂಗಳೂರು, ಡಿಸೆಂಬರ್ 17 :ನಟ ಯಶ್ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸುದ್ಧಿ ಇದೀಗ ಹಲವು ಉಹಾಪೋಹಗಳಿಗೆ ಕಾರಣವಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಮೂಲಕ ಬಂದವರು ತನ್ನ ಅಧಿಕಾರ, ಅಂತಸ್ತು ಕಳೆದುಕೊಳ್ಳುತ್ತಾರೆ ಎನ್ನುವ ವಿಚಾರ ಸುಬ್ರಹ್ಮಣ್ಯ ಭಾಗದ ಜನರ ಪ್ರತಿಯೊಬ್ಬರ ಬಾಯಲ್ಲೂ ಕೇಳಬಹುದಾಗಿದೆ.
ಇದೇ ಕಾರಣಕ್ಕಾಗಿಯೇ ಕ್ಷೇತ್ರಕ್ಕೆ ಯಾರಾದರೂ ರಾಜಕಾರಣಿಯೋ, ಸೆಲೆಬ್ರಿಟಿಯೋ ಹೆಲಿಕಾಪ್ಟರ್ ಮೂಲಕ ಕ್ಷೇತ್ರದ ಮೇಲೆ ಹಾರಾಟ ನಡೆಸಿದರೂ ಆತನ ಹಣೆ ಬರಹವನ್ನು ಸುಬ್ರಹ್ಮಣ್ಯ ಭಾಗದ ಜನ ಲೆಕ್ಕಾಚಾರ ಮಾಡಿಯಾಗುತ್ತದೆ.
ಇಲ್ಲಿನ ಜನರ ಪ್ರಕಾರ ಈ ಹಿಂದೆ ಕ್ಷೇತ್ರಕ್ಕೆ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಹೆಲಿಕಾಪ್ಟರ್ ಮೂಲಕ ಕ್ಷೇತ್ರಕ್ಕೆ ಆಗಮಿಸಿದ್ದರು.
ಆದರೆ ಬಳಿಕದ ದಿನಗಳಲ್ಲಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು.
ಅದೇ ಪ್ರಕಾರ ಹಿಂದೆ ಪಂಜಾಬ್ ಮುಖ್ಯಮಂತ್ರಿ ಯಾಗಿದ್ದ ಅಮರಿಂದರ್ ಸಿಂಗ್ ಕೂಡಾ ಕ್ಷೇತ್ರಕ್ಕೆ ಹೆಲಿಕಾಪ್ಟರ್ ಏರಿ ಬಂದಿದ್ದರು.
ಅಂದು ಕೂಡಾ ಅವರು ತನ್ನ ಸ್ಥಾನದಿಂದ ಕೆಳಗಿಳಿಯಬೇಕಾಗಿತ್ತು.
ಅದೇ ಪ್ರಕಾರ ಮದ್ಯದ ದೊರೆ ವಿಜಯ ಮಲ್ಯ ಕೂಡಾ ಕುಕ್ಕೆಗೆ ಹೆಲಿಕಾಪ್ಟರ್ ಮೂಲಕ ಬಂದು ಸೇವೆ ಸಲ್ಲಿಸಿದ್ದರು.
ಆ ಬಳಿಕದ ದಿನಗಳಿಂದ ವಿಜಯಮಲ್ಯರ ಉದ್ಯಮ ರಂಗದಲ್ಲಿ ಏರುಪೇರಾಗಿತ್ತು ಎನ್ನುವುದನ್ನು ಇಲ್ಲಿನ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಹಿಂದಿನ ಹೆಲಿಕಾಪ್ಟರ್ ಗಳು ದೇವಸ್ಥಾನಕ್ಕೆ ಸುತ್ತು ಹೊಡೆದು ಬಳಿಕ ಲ್ಯಾಂಡಿಗ್ ಆಗುತ್ತಿತ್ತು.
ಹೀಗೆ ಸುತ್ತು ಹೊಡೆಯುವುದು ಕ್ಷೇತ್ರಕ್ಕೆ ಸಂಬಂಧಪಟ್ಟ ಗರುಡ ಮಾತ್ರವಾಗಿದೆ.
ಈ ಕಾರಣಕ್ಕಾಗಿಯೇ ಈ ಹಿಂದೆ ಇಂಥಹ ಘಟನೆಗಳು ನಡೆದಿದೆ.
ಆದರೆ ಇದೀಗ ಹೆಲಿಕಾಪ್ಟರ್ ದೇವಸ್ಥಾನಕ್ಕೆ ಸುತ್ತು ಬರದೆ ಕುಮಾರಧಾರಾ ಬಳಿಯೇ ಲ್ಯಾಂಡಿಗ್ ಆಗುವುದರಿಂದ ಇಂಥ ಸಮಸ್ಯೆ ಆಗಲು ಸಾಧ್ಯವಿಲ್ಲ ಎನ್ನುವುದು ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿಯವರ ಅಭಿಪ್ರಾಯವಾಗಿದೆ.
ಏನೇ ಆಗಲಿ ಹೆಲಿಕಾಪ್ಟರ್ ಮೂಲಕ ಕ್ಷೇತ್ರಕ್ಕೆ ಆಗಮಿಸಿದವರ ಪಟ್ಟಿಗೆ ಇದೀಗ ನಟ ಯಶ್ ಕೂಡಾ ಸೇರಿಕೊಂಡಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಯಶ್ ನಟನೆಯ ಕೆ.ಜಿ.ಎಫ್ ಚಿತ್ರದ ಮೇಲೆ ಇದರ ಪರಿಣಾಮ ಬೀಳುತ್ತಾ ಎನ್ನುವ ಕುತೂಹಲವೂ ಮೂಡಲಾರಂಭಿಸಿದೆ.