FILM
ತಲೆಮರೆಸಿಕೊಂಡಿರುವ ನಟಿ ಅಭಿನಯಾಗೆ ಲುಕ್ ಔಟ್ ಜಾರಿ ಮಾಡಿದ ಪೊಲೀಸರು
ಬೆಂಗಳೂರು ಫೆಬ್ರವರಿ 09: ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿ ನಾಪತ್ತೆಯಾಗಿರುವ ನಟಿ ಅಭಿನಯಾ ಅವರ ಪತ್ತೆಗೆ ಬೆಂಗಳೂರು ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ನಟಿ ಅಭಿನಯಾ ಅತ್ತಿಗೆಗೆ ವರದಕ್ಷಿಣಿ ಕಿರುಕುಳ ನೀಡಿದ ಪ್ರಕರಣದಲ್ಲಿ ಇತ್ತೀಚೆಗೆ ಜೈಲು ಶಿಕ್ಷೆ ಪ್ರಕಟ ಆಗಿತ್ತು. ಆ ಬಳಿಕ ಅವರು ತಲೆ ಮರೆಸಿಕೊಂಡಿದ್ದಾರೆ. ಅಭಿನಯಾ ಅವರ ಪತ್ತೆಗಾಗಿ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರು ಬಲೆ ಬೀಸಿದ್ದಾರೆ. ಅಭಿನಯಾ ಜೊತೆ ಅವರ ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜು ಅವರಿಗಾಗಿಯೂ ಹುಡುಕಾಟ ನಡೆದಿದೆ. ಅಪರಾಧಿಗಳ ಬಗ್ಗೆ ಸುಳಿವು ಸಿಕ್ಕರೆ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದು, ಲುಕ್ಔಟ್ ನೋಟಿಸ್ (lookout notice) ಜಾರಿ ಮಾಡಿದ್ದಾರೆ. ಪೊಲೀಸರು ಈ ಮೂವರನ್ನೂ ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಅವರು ತಲೆಮರೆಸಿಕೊಂಡಿದ್ದಾರೆ.